ಬೆಂಗಳೂರು, ಸೆ.21-ತಮ್ಮ ನೇತೃತ್ವದ ಸರ್ಕಾರದ ಪ್ರಥಮ ಪ್ರಾಶಸ್ತ್ಯವೇ ಕಾರ್ಮಿಕರ ಕಲ್ಯಾಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಾರ್ಮಿಕ ವರ್ಗಕ್ಕೆ ಸಮಯಕ್ಕೆ ಸರಿಯಾಗಿ ಸವಲತ್ತುಗಳನ್ನು ನೀಡುವ ಮೂಲಕ ಅವರ ಶ್ರಮಕ್ಕೆ ಬೆಲೆ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಯೋಜಿಸಿದ್ದ ಸಮಾರಂಭದಲ್ಲಿ ಇಲಾಖೆಯ ಪ್ರತ್ಯೇಕ ವೆಬ್‍ಸೈಟï, ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರು ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಸಂಚರಿಸಲು ಉಚಿತ ಬಸ್‍ಪಾಸ್ ಮತ್ತು ಶೈಕ್ಷಣಿಕವಾಗಿ ಸಾಧನೆಗೈದಿರುವ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ : BREAKING : ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ವಿಧಿವಶ
ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಹಿರಿದು. ಎಷ್ಟೇ ಹಣ ಮಂಜೂರು ಮಾಡಿದರೂ ಬಿಸಿಲಿನಲ್ಲಿ ಕೆಲಸ ಮಾಡಿ ರಸ್ತೆ ನಿರ್ಮಾಣದಂತಹ ಕಾಮಗಾರಿಗಳನ್ನು ಮಾಡುವುದು ಕಾರ್ಮಿಕರು. ಈ ಕಾರ್ಮಿಕರಿಗೆ ಬದುಕಿನ ಭರವಸೆ ಮೂಡಿಸಬೇಕು. ಕಾರ್ಮಿಕರಿಗೆ ತಮ್ಮ ಕುಟುಂಬ ಮತ್ತು ಮಕ್ಕಳ ಭವಿಷ್ಯ ಸದೃಢ ಎನಿಸಬೇಕು. ಅದಕ್ಕೆ ಸಮಾಜ, ಸರ್ಕಾರ ಮತ್ತು ಖಾಸಗಿ ಕೈಗಾರಿಕೆಗಳು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಶ್ರಮಿಕನಿಗೆ ಸ್ಥಿರತೆ ನೀಡಿದಾಗ ಉತ್ತಮ ಕೆಲಸ ಆಗಲಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಮಿಕ ನಿಯಿಂದ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು. ರೈತರು, ಕಾರ್ಮಿಕರು, ಸೈನಿಕರು ಬಹಳ ಮುಖ್ಯವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಕ್ಲಿನಿಕ್, ಕಾರ್ಮಿಕ ಮಕ್ಕಳ ಉನ್ನತ ಶಿಕ್ಷಣಕ್ಕೆ ತರಬೇತಿ, ಮನೆ ಕಟ್ಟಲು ಸಹಾಯ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ.
ಉಚಿತ ಬಸ್‍ಪಾಸ್ ಸೇವೆ ಆರಂಭಿಸಲಾಗಿದೆ ಎಂದ ಮುಖ್ಯಮಂತ್ರಿಗಳು, ರಾಜ್ಯದ ಎಲ್ಲ ಕಟ್ಟಡ ಕಾರ್ಮಿಕರಿಗೂ ಈ ಉಚಿತ ಬಸ್‍ಪಾಸ್ ಸೇವೆ ದೊರಕಿಸಿಕೊಡುವಂತೆ ಇಲಾಖೆ ಅಕಾರಿಗಳಿಗೆ ಕರೆ ನೀಡಿದರು. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿ, ರಾಜ್ಯದ ಶ್ರಮಿಕ ವರ್ಗದ ಬಹು ದಿನಗಳಿಂದ ಬಾಕಿ ಉಳಿದಿದ್ದ ಸವಲತ್ತುಗಳ ಅರ್ಜಿಗಳನ್ನು ಒಂದೇ ಬಾರಿಗೆ ಇತ್ಯರ್ಥ ಪಡಿಸುವ ಸಲುವಾಗಿ ಕಾರ್ಮಿಕ ಅದಾಲತ್‍ಗಳನ್ನು ನಡೆಸಲಾಗಿದೆ.
ಕಾರ್ಮಿಕ ಅದಾಲತ್‍ಗೆ ಸಲ್ಲಿಕೆಯಾಗಿದ್ದ 3 ಲಕ್ಷಕ್ಕೂ ಅಧಿಕ ಅರ್ಜಿಗಳ ಪೈಕಿ ಸ್ಥಳದಲ್ಲಿಯೇ 2 ಲಕ್ಷದ 97 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಒಟ್ಟಾರೆ 92 ಕೋಟಿ ರೂ.ಗಳ ಸವಲತ್ತು ಮತ್ತು ಸಹಾಯಧನವನ್ನು ವಿತರಿಸಲಾಯಿತು ಎಂದು ತಿಳಿಸಿದರು.
750 ಕಾರ್ಮಿಕ ಮಕ್ಕಳ ಉನ್ನತ ವ್ಯಾಸಂಗಕ್ಕೆ ತರಬೇತಿ ನೀಡಲಾಗುತ್ತಿದೆ. 2019 ಮತ್ತು 2022ರ ತಮ್ಮ ಅಕಾರದ ಅವಯಲ್ಲಿ ಒಟ್ಟಾರೆ 3,1619 ಕೋಟಿ ರೂ. ಸಹಾಯಧನವನ್ನು ವಿತರಿಸಲಾಗಿದ್ದು, ಇದು ಕಾರ್ಮಿಕ ಇಲಾಖೆ ಇತಿಹಾಸದಲ್ಲೇ ದಾಖಲೆ ಎಂದು ಅವರು ವಿವರಿಸಿದರು.
ಪ್ರತ್ಯೇಕ ವೆಬ್‍ಸೈಟ್ ಹೊಂದಿರುವ ಎರಡನೇ ರಾಜ್ಯವಾಗಿದೆ ಎಂದರಲ್ಲದೆ, ಉಚಿತ ಬಸ್‍ಪಾಸ್ ಜತೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಕಾರ್ಮಿಕರ ಮಕ್ಕಳಿಗೆ 10 ಸಾವಿರ ರೂ. ಪ್ರತಿಭಾ ಪುರಸ್ಕಾರ ನೀಡುವ ಯೋಜನೆಯನ್ನೂ ಜಾರಿಗೊಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೆಎಸ್‍ಆರ್‍ಟಿಸಿ ಅಧ್ಯಕ್ಷ ಮತ್ತು ಶಾಸಕ ಕೆ. ಚಂದ್ರಪ್ಪ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ಇಲಾಖೆ ಆಯುಕ್ತ ಅಕ್ರಂ ಪಾಷ, ಕಲ್ಯಾಣ ಕರ್ನಾಟಕ ಮಂಡಳಿಯ ಡಾ.ರಾಜ್ ಕುಮಾರ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯನಿರ್ವಹಣಾಕಾರಿ ಮತ್ತು ಕಾರ್ಯದರ್ಶಿ ಗುರು ಪ್ರಸಾದ್ ಎಂ.ಪಿ., ಜಂಟಿ ಕಾರ್ಯದರ್ಶಿ ಶಿವಪುತ್ರ, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.