ಪರ ವಿರೋಧ ಚರ್ಚೆಗೆ ಗ್ರಾಸವಾದ ಮೋಹನ್ ಭಾಗವತ್‍ರ ಹೇಳಿಕೆ

Social Share

ನವದೆಹಲಿ,ಫೆ.6- ದೇಶದಲ್ಲಿನ ನಿರುದ್ಯೋಗಕ್ಕೆ ವೃತ್ತಿ ಘನತೆ ಕೊರತೆಯೆ ಪ್ರಮುಖ ಕಾರಣ ಎಂದು ಆರ್‍ಎಸ್‍ಎಸ್‍ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಿ ಅವರ ಭರವಸೆ ಏನಾಯಿತು ಎಂಬ ಪ್ರಶ್ನೆಯೂ ಕೇಳಿ ಬಂದಿದೆ.

ನಿನ್ನೆ ಮುಂಬೈನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮೋಹನ್ ಭಾಗವತ್, ಜನ ಸರ್ಕಾರಿ ಉದ್ಯೋಗದ ಹಿಂದೆ ಓಡುವುದನ್ನು ನಿಲ್ಲಿಸಬೇಕು. ಯಾವುದೇ ಕೆಲಸದಲ್ಲಿ ದೊಡ್ಡದು, ಚಿಕ್ಕದು ಎಂಬುದಿಲ್ಲ. ಎಲ್ಲರೂ ದುಡಿಯುವುದು ಸಮಾಜಕ್ಕಾಗಿ. ಅದು ಕಠಿಣ ಪರಿಶ್ರಮದ ಕೆಲಸವಾಗಿರಬಹುದು ಅಥವಾ ಭೌದ್ಧಿಕತೆಯ ಉದ್ಯೋಗವಾಗಿರಬಹುದು. ಅದನ್ನು ಗೌರವಿಸಬೇಕು ಎಂದು ಹೇಳಿದರು.

ದೇಶದಲ್ಲಿ ಎಲ್ಲರೂ ಸರ್ಕಾರಿ ಉದ್ಯೋಗದ ಹಿಂದೆ ಬಿದಿದ್ದಾರೆ. ಸರ್ಕಾರಿ ಉದ್ಯೋಗಳು ಇರುವುದು ಶೇ.10ರಷ್ಟು ಮಾತ್ರ. ಆದಾಗ್ಯೂ ಅದರ ಸುತ್ತಾ ಶೇ.20ರಷ್ಟು ಉದ್ಯೋಗಗಳು ಸೃಷ್ಟಿಯಾಗಬಹುದು. ವಿಶ್ವದ ಯಾವುದೇ ಸಮಾಜ ಶೇ.30ಕ್ಕಿಂತ ಮೇಲ್ಪಟ್ಟು ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಜೀವನೋಪಾಯಕ್ಕಾಗಿ ದುಡಿಯುವವರು ಸಮಾಜಕ್ಕೆ ಜವಾಬ್ದಾರರಾಗಿರುತ್ತಾರೆ. ಇಲ್ಲಿ ದೊಡ್ಡವರು, ಚಿಕ್ಕವರು ಎಂಬುದಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ನಡೆಯುವ IMF ದುಂಡು ಮೇಜಿನ ಸಭೆಗೆ ಚೀನಾ ಹಣಕಾಸು ಸಚಿವರು

ದೇವರ ಕಣ್ಣಿನಲ್ಲಿ ಪ್ರತಿಯೊಬ್ಬರು ಸಮಾನರು. ಜಾತಿ ಮನುಷ್ಯನ ಸೃಷ್ಟಿಯೇ ಹೊರತು ದೇವರು ಮಾಡಿದ್ದಲ್ಲ. ತಟ್ಟೆ ಲೋಟ ತೊಳೆಯುತ್ತಿದ್ದ ವ್ಯಕ್ತಿಯೊಬ್ಬರು ಪಾನ್ ಅಂಗಡಿ ತೆರೆದು 28 ಲಕ್ಷ ರೂಪಾಯಿ ದುಡಿಯುತ್ತಾರೆ. ಇಂತಹ ಉದಾಹರಣೆಗಳು ನಮ್ಮ ಕಣ್ಣಮುಂದೆ ಇರುವಾಗಲೂ ಯುವಕರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಲೇ ಕಾಲ ಕಳೆಯುತ್ತಾರೆ. ಕೆಲಸ ನೀಡುವ ಸಂಸ್ಥೆಗಳಿಂದ ಪ್ರತಿಕ್ರಿಯೆ ಬರದಿದ್ದರೂ ತಮ್ಮ ಪ್ರಯತ್ನವನ್ನು ಬಿಡುವುದಿಲ್ಲ ಎಂದು ವಿಷಾದಿಸಿದರು.

ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸುತ್ತಿದ್ದರೂ ರೈತರ ಮಕ್ಕಳು ಮದುವೆಗಾಗಿ ಹರಸಾಹಸ ಪಡಬೇಕು ಎಂದು ಅಸಮಧಾನ ವ್ಯಕ್ತಪಡಿಸಿದ ಅವರು, ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ಪ್ರಸ್ತುತ ಪರಿಸ್ಥಿತಿ ಅನುಕೂಲಕರವಾಗಿದೆ. ನಮ್ಮಲ್ಲಿ ಕೌಶಲ್ಯಗಳಿಗೆ ಕೊರತೆ ಇಲ್ಲ. ಆದರೂ ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳಂತೆ ನಾವಾಗುತ್ತಿಲ್ಲ ಎಂದಿದ್ದಾರೆ.

ಇಸ್ಲಾಮಿಕ್ ಆಕ್ರಮಣಕ್ಕೂ ಮೊದಲು ಇತರ ದಾಳಿಕೋರರು ಭಾರತದಲ್ಲಿನ ಜೀವನ ಕ್ರಮವನ್ನು ವಿಚಲಿತಗೊಳಿಸಿರಲಿಲ್ಲ. ನಮ್ಮ ಸಂಪ್ರದಾಯ, ಆಲೋಚನಾ ಶಾಲೆಗಳು ಯಥಾಸ್ಥಿತಿಯಲ್ಲಿದ್ದವು. ಮುಸ್ಲಿಂ ದಾಳಿ ನಂತರ ವಿತಂಡವಾದದ ಮೂಲಕ ನಮ್ಮನ್ನು ಸೋಲಿಸಿದರು, ನಂತರ ಬಲ ಪ್ರಯೋಗ ನಡೆಸಿದರು.

ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ದಾರ್ಶನಿಕರ ವಿರೋಧದಿಂದ ಅಸ್ಪೃಶ್ಯತೆ ತಗ್ಗಿದೆ. ಸಮಾಜವನ್ನು ಗಲಿಬಿಲಿ ಮಾಡುವ ಈ ಪಿಡುಗನ್ನು ವಿರೋಧಿಸಿಯೇ ಅಂಬೇಡ್ಕರ್ ಹಿಂದು ಧರ್ಮವನ್ನು ತ್ಯಜಿಸಿದರು. ಆದರೆ ಅನ್ಯ ಧರ್ಮವನ್ನು ಸೇರಲಿಲ್ಲ. ಬುದ್ಧನ ಹಾದಿಯಲ್ಲಿ ನಡೆದರು. ಅವರ ಬೋಧನೆಗಳು ಭಾರತದ ಆಲೋಚನೆಗಳಲ್ಲಿ ಆಳವಾಗಿ ಬೇರೂರಿದೆ ಎಂದು ಮೋಹನ್ ಭಾಗವತ್ ಹೇಳಿದರು.

ಅದಾನಿ ಹಗರಣದ ತನಿಖೆಗೆ ಒತ್ತಾಯಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ಈ ಹೇಳಿಕೆಗೆ ರಾಜ್ಯಸಭೆಯ ಸದಸ್ಯ ಕಪಿಲ್ ಸಿಬಾಲ್ ತಿರುಗೇಟು ನೀಡಿದ್ದಾರೆ. ಸರ್ಕಾರಿ ಉದ್ಯೋಗಗಳ ಹಿಂದೆ ಓಡಬೇಡಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ ಖಾಸಗಿ ಉದ್ಯೋಗಗಳು ಎಲ್ಲಿವೆ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಗೂ ಮೊದಲು ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದರು. ಅದರ ವಿಷಯ ಏನಾಯಿತು ಎಂದು ಮೋಹನ್ ಭಾಗವತ್‍ರನ್ನು ಸಿಬಾಲ್ ಪ್ರಶ್ನಿಸಿದ್ದಾರೆ.

ಇನ್ನೂ ಸಾಮಾಜಿಕ ಜಾಲತಾಣದಲ್ಲಿಯೂ ವ್ಯಾಪಕ ಚರ್ಚೆಗಳಿಗೆ ಮೋಹನ್ ಭಾಗವತ್‍ರ ಹೇಳಿಕೆ ವೇದಿಕೆಯಾಗಿದೆ. 2014ರ ಲೋಕಸಭೆ ಚುನಾವಣೆಗೂ ಮೊದಲು ನಿರುದ್ಯೋಗವನ್ನೇ ಚರ್ಚೆಯ ವಿಷಯವಾಗಿಟ್ಟು ಕೊಂಡು ಪ್ರಚಾರ ನಡೆಸಲಾಯಿತು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿದ್ದರು.

ಆಗ ಮೋಹನ್ ಭಾಗವತ್‍ರ ಸಮಕಾಲೀನ ನಾಯಕರು ನಿರುದ್ಯೋಗಕ್ಕೆ ಸರ್ಕಾರವೇ ಕಾರಣ ಎಂದು ದೊಡ್ಡ ಧ್ವನಿಯಲ್ಲಿ ಮಾತನಾಡಿದರು. ಈಗ ವೃತ್ತಿ ಗೌರವದ ಕೊರತೆ ನಿರುದ್ಯೋಗಕ್ಕೆ ಕಾರಣ ಎಂದು ಭಿನ್ನವಾದ ಮಾಡುತ್ತಿದ್ದಾರೆ. ಪ್ರಧಾನಿ ಪಕೋಡ ಮಾರಿ ಎಂದರು, ಮೋಹನ್ ಭಾಗವತ್ ಪಾನ್ ಬೀಡಾ ಅಂಗಡಿ ಮಾಡಿ ಎನ್ನುತ್ತಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿವೆ.

labour, causing, unemployment, RSS chief, Mohan Bhagwat, chasing jobs,

Articles You Might Like

Share This Article