ಬೆಂಗಳೂರು, ಸೆ.19- ಬೆಂಗಳೂರಿನಲ್ಲಿ ಕೆರೆಗಳನ್ನು ಮುಚ್ಚಿರುವ ಹಾಗೂ ಒತ್ತುವರಿ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. ನಿಯಮ 69ರಡಿ ರಾಜ್ಯದಲ್ಲಿ ಪ್ರವಾಹ, ಅತಿವೃಷ್ಟಿ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಗೆ ಕಂದಾಯ ಸಚಿವರು ಉತ್ತರ ನೀಡುವ ಸಂದರ್ಭದಲ್ಲಿ ಮದ್ಯ ಪ್ರವೇಶಿಸಿ ಸಿಎಂ ಮಾತನಾಡಿದರು.
ಕಾಲ ಕಾಲಕ್ಕೆ ಅಭಿವೃದ್ಧಿಯಾದಂತೆ ಕೆರೆಗಳನ್ನು ಮುಚ್ಚಲಾಗಿದೆ. ಸುಧಾರಣೆ ಹೆಸರಿನಲ್ಲಿ ಹಿಂದೆ ಆಗಿರುವ ತಪ್ಪುಗಳನ್ನು ಮುಂದೆ ಆಗದಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಯಾವ ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಕೆರೆಗಳನ್ನು ಮುಚ್ಚಲಾಗಿದೆ ಎಂಬುದನ್ನು ತನಿಖೆ ಮಾಡಿಸಿ, ಇದರ ಜತೆಗೆ ಒತ್ತುವರಿ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದರು.
ಯಾವ ರಾಜಕೀಯ ಬೆಂಬಲಕ್ಕೆ ಮುಚ್ಚಲಾಗಿದೆ ಯಾವ ಅಕಾರಿ ಇದ್ದರು, ಬೇನಾಮಿ ಆಸ್ತಿ ಯಾರು ಮಾಡಿದ್ದಾರೆ. 2007ರ ನಂತರ ಯಾರ್ಯಾರು ಕಟ್ಟಿದ್ದಾರೆ ಯಾರ ಕಾಲದಲ್ಲಿ ಆಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದÀು ಹೇಳಿದರು.
ಇದನ್ನೂ ಓದಿ : ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!
ಕೆರೆ ಮತ್ತು ಗೋಮಾಳ ಒತ್ತುವರಿಯಾಗುತ್ತಿದೆ. ಅವುಗಳ ರಕ್ಷಣೆಗೆ ಸಾರ್ವಜನಿಕ ಹಿತಾಸಕ್ತಿಬೇಕು. ಬಡವರ ಒತ್ತುವರಿ ಮಾತ್ರ ತೆರವುಗೊಳಿಸಿ ಶ್ರೀಮಂತರನ್ನು ರಕ್ಷಣೆ ಮಾಡುತ್ತಾರೆ ಎಂಬ ಆರೋಪವಿದೆ. ವ್ಯವಸ್ಥೆ ಕೆಟ್ಟಿದೆ. 2018ರಲ್ಲಿ ಕಂದಾಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು.
ಬತ್ತಿ ಹೋಗಿರುವ ಕೆರೆಗಳನ್ನು ನಕಾಶೆಯಿಂದ ತೆಗೆಯಬೇಕು ಎಂಬ ಪ್ರಯತ್ನ ಆಗಿತ್ತು. ಸಾರ್ವಜನಿಕರ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಅದನ್ನು ವಾಪಸ್ ಪಡೆಯಲಾಗಿದೆ. ಈ ವಿಚಾರದಲ್ಲಿ ಸತ್ಯವಿದೆ, ದಾಖಲೆಯೂ ಇದೆ. ಈ ರೀತಿಯ ಪ್ರಯತ್ನದ ಮೂಲಕ ಅಕಾರಿಗಳು ಯಾವುದೋ ಕಾರಣ ಹೇಳಿ, ನಿರುಪಯುಕ್ತ ಎನ್ನುವ ಮೂಲಕ ತಪ್ಪು ದಾರಿ ಹಿಡಿಯುವುದನ್ನು ತಪ್ಪಿಸಬೇಕಿದೆ. ಕೆರೆ ಮುಚ್ಚಿರುವ, ಒತ್ತುವರಿ ಮಾಡಿರುವ ವಿಚಾರದಲ್ಲಿ ಯಾವ ಪ್ರಭಾವಿಯೇ ಇದ್ದರೂ ತನಿಖೆ ಮಾಡಿಸಲಾಗುವುದು.
ಈ ಹಂತದಲ್ಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಮೈಸೂರಿನಲ್ಲೂ ತನಿಖೆ ಮಾಡಿಸಿ ಯಾವ ಅಕಾರಿ, ರಾಜಕಾರಣಿ ಭಾಗಿಯಾಗಿದ್ದರೆ ಶಿಕ್ಷೆ ಕೊಡಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಒಳಗೊಂಡಂತೆ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷದ ಶಾಸಕರ ನಡುವೆ ವಾಗ್ವಾದ ನಡೆಯಿತು.
ನಂತರ ಮಾತು ಮುಂದುವರೆಸಿದ ಮುಖ್ಯಮಂತ್ರಿ ತನಿಖೆ ನಡೆಸುವ ವಿಚಾರ ಬೆಂಗಳೂರಿಗೆ ಸೀಮಿತವಲ್ಲ. ರಾಜ್ಯದಲ್ಲಿ ಅಸ್ಥಿತ್ವ ಕಳೆದುಕೊಂಡ ಕೆರೆಗಳನ್ನು ಉಳಿಸಬೇಕೆಂಬ ಪ್ರಸ್ತಾವನೆ ಇದೆ. ಅದರಲ್ಲಿ ಬೆಂಗಳೂರು ಇದೆ. ಕೆರೆ ಅಷ್ಟೆ ಅಲ್ಲ ಒತ್ತುವರಿಯನ್ನು ತೆರವು ಮಾಡಬೇಕಿದೆ. ಒತ್ತಡ ಬಂದಿರುತ್ತದೆ. ಅದನ್ನು ತಡೆಯಬೇಕು. ಇಚ್ಛಾಶಕ್ತಿ ಮೂಲಕ ನಡೆದುಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್‍ನ ಕೆ.ಜೆ. ಜಾರ್ಜ್, ಲಕ್ಷ್ಮಣರಾವ್ ಸಮಿತಿ ಬೆಂಗಳೂರಿನಲ್ಲಿ 262 ಕೆರೆಗಳಿವೆ ಎಂದು ಹೇಳಿದ್ದರು. 800 ಕಿ.ಮೀ. ಮಳೆ ನೀರು ಕಾಲುವೆಗಳಿವೆ. ಅದು ಸುಧಾರಣೆಯಾಗಬೇಕು. ಇನ್ನೂ 600 ಒತ್ತುವರಿ ತೆರವು ಬಾಕಿ ಇದೆ. ಅದನ್ನು ತೆರವುಗೊಳಿಸಬೇಕು. ನನ್ನ ಕಾಲದಲ್ಲಿ ಯಾವ ಕೆರೆ ಕಬಳಿಸಿದ್ದೇವೆ. ಎಲ್ಲಿ ಒತ್ತುವರಿ ಮಾಡಿದ್ದೇವೇ ಹೇಳಿ. ತನಿಖೆ ಮಾಡಿಸಿ, ಕಾನೂನು ಬಾಹಿರ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ. ನಿಮ್ಮ ಪಕ್ಷದವರು ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾತನಾಡಿ, ಕೆರೆ ಮುಚ್ಚಿರುವುದು ಸತ್ಯ. ಕಾಲ ಕಾಲಕ್ಕೆ ಆದ ಅಭಿವೃದ್ಧಿಯಿಂದಾಗಿ ಮುಚ್ಚಲಾಗಿದೆ. ಈ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದಾಗ, ನಿಮ್ಮವರು ಮೈ ಮೇಲೆ ಸಗಣಿಯನ್ನೇ ಸುರಿದಿದ್ದಾರೆ ಎಂದರು. ಆಗ ಮತ್ತೆ ಉಭಯ ಪಕ್ಷಗಳ ನಡುವೆ ವಾಗ್ವಾದ ನಡೆಯಿತು.