ಕೆರೆಗಳ ಒತ್ತುವರಿಯೇ ‘ಸೇಫ್ ಸಿಟಿ’ ಬೆಂಗಳೂರಿನ ಈ ದುಸ್ಥಿತಿಗೆ ಕಾರಣ

Social Share

ಇತ್ತೀಚೆಗೆ ಸುರಿದ ರಣಮಳೆಗೆ ಇಡೀ ನಗರ ತತ್ತರಿಸಿ ಹೋಗಿದೆ. ಒಂದು ಕಾಲದಲ್ಲಿ ಸೇಫ್ ಸಿಟಿಯಾಗಿದ್ದ ಸಿಲಿಕಾನ್ ಸಿಟಿಯ ಇಂದಿನ ಈ ದುಸ್ಥಿತಿಗೆ ಕೆರೆಗಳ ಒತ್ತುವರಿಯೂ ಒಂದು ಪ್ರಮುಖ ಕಾರಣ ಎನ್ನುವುದನ್ನು ಯಾರು ಮರೆಯುವಂತಿಲ್ಲ.
ನಾಡಪ್ರಭು ಕೆಂಪೇಗೌಡ ನಿರ್ಮಿಸಿರುವ ಬೆಂಗಳೂರು ನಗರದಲ್ಲಿ 205 ಪ್ರಮುಖ ಕೆರೆಗಳಿದ್ದವು. ಇವುಗಳ ಪೈಕಿ ಕೇವಲ 20 ಕೆರೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಕೆರೆಗಳನ್ನು ಸರ್ಕಾರ ಹಾಗೂ ಖಾಸಗಿಯವರು ಒತ್ತುವರಿ ಮಾಡಿಕೊಂಡು ಬೃಹದಾಕಾರದ ಕಟ್ಟಡ ನಿರ್ಮಿಸಿದ್ದಾರೆ.

205 ಕೆರೆಗಳ ಪೈಕಿ 160 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ. 5673.21 ಎಕರೆ ವಿಸ್ತೀರ್ಣದ 160 ಕೆರೆಗಳ ಪೈಕಿ 847.31 ಎಕರೆಯಷ್ಟು ವಿಸ್ತೀರ್ಣದ ಕೆರೆ ಅಂಗಳ ಒತ್ತುವರಿಯಾಗಿದೆ. ಇದರಲ್ಲಿ ಸರ್ಕಾರಿ ಸಂಸ್ಥೆಗಳೇ 535.21 ಎಕರೆ ಹಾಗೂ ಖಾಸಗಿ ಸಂಸ್ಥೆಗಳು 249.30 ಎಕರೆಯಷ್ಟು ವಿಸ್ತೀರ್ಣದ ಕೆರೆ ಒತ್ತುವರಿ ಮಾಡಿಕೊಂಡಿವೆ.

ಅದರಲ್ಲೂ 131 ಕೆರೆಗಳನ್ನು ವಿವಿಧ ಉದ್ದೇಶಗಳಿಗಾಗಿ ಸಂಪೂರ್ಣ ಒತ್ತುವರಿ ಮಾಡಲಾಗಿದ್ದು, ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಪಾತ್ರವೇ ಹೆಚ್ಚಿದೆ. 28 ಕೆರೆಗಳ ಸುತ್ತಮುತ್ತಲಿನ 764.32 ಎಕರೆಗಳನ್ನು ರಸ್ತೆಗಳು, ರೈಲು ಮಾರ್ಗಗಳು ಮತ್ತು ಹೆದ್ದಾರಿಗಳ ನಿರ್ಮಾಣಕ್ಕಾಗಿ ಒತ್ತುವರಿ ಮಾಡಿರುವುದು ಕಂಡ ಬಂದಿದೆ.

ಸರ್ಕಾರದ ವಿವಿಧ ಇಲಾಖೆಗಳಾದ ರೈಲ್ವೆ , ಬಿಎಂಟಿಸಿ, ಅಂಗನವಾಡಿ, ಶಾಲಾ ಕಾಲೇಜುಗಳು, ಬಿಡಿಎ, ಜಲಮಂಡಳಿ, ಲೋಕೋಪಯೋಗಿ ಇಲಾಖೆಗಳು ಇದರ ಜೊತೆಗೆ ಸ್ವತಃ ಬಿಬಿಎಂಪಿ ಅಕಾರಿಗಳೇ 531.21 ಎಕರೆ ಕೆರೆ ಪ್ರದೇಶ ಒತ್ತುವರಿ ಮಾಡಿ ಪಾರ್ಕ್, ಕಟ್ಟಡ, ರಿಂಗ್ರೋಡ್ ಮತ್ತಿತರ ಕಾಮಗಾರಿ ನಡೆಸಿದ್ದಾರೆ.

ಇದನ್ನೂ ಓದಿ : “ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಬದ್ಧ”

ಉಳಿದಂತೆ ಬಸ್ ನಿಲ್ದಾಣ, ಸ್ಟೇಡಿಯಂ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೂ ಕೆರೆಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಐಟಿ-ಬಿಟಿ ಸಂಸ್ಥೆಗಳು ಹಾಗೂ ಮತ್ತಿತರ ಗಣ್ಯರು ಕೆರೆಗಳನ್ನು ನುಂಗಿ ನೀರು ಕುಡಿದಿರುವುದಕ್ಕೂ ಸಾಕ್ಷಿ ಲಭ್ಯವಾಗಿದೆ.
ಪ್ರಮುಖ ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು ಹಾಗೂ ಖ್ಯಾತ ಬಿಲ್ಡರ್ಗಳು ಕೆರೆ ಅಂಗಳಗಳಲ್ಲಿ ಅಪಾರ್ಟ್ಮೆಂಟ್ ಹಾಗೂ ಐಟಿ-ಬಿಟಿ ಸಂಸ್ಥೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಸಿಲಿಕಾನ್ ಸಿಟಿಯ ಪ್ರಮುಖ ಐಟಿ-ಬಿಟಿ ಸಂಸ್ಥೆಗಳ ಹೈಟೆಕ್ ಜನರೇ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನು 249.30 ಎಕರೆ ಕೆರೆ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗಳು ಕೃಷಿ, ಕಟ್ಟಡ ನಿರ್ಮಾಣ, ಶೆಡ್, ಅಪಾರ್ಟ್ಮೆಂಟ್, ದೇವಸ್ಥಾನ, ಮಸೀದಿ, ಚರ್ಚ್, ಖಾಸಗಿ ರಸ್ತೆ, ಖಾಸಗಿ ಶಾಲಾ-ಕಾಲೇಜುಗಳನ್ನು ನಿರ್ಮಿಸಿಕೊಂಡಿದ್ದಾರೆ.

ಇದನ್ನೂ ಓದಿ : BIG NEWS : ಉಕ್ರೇನ್‍ ಅಧ್ಯಕ್ಷ ಝೆಲೆನ್‍ಸ್ಕಿ ಕಾರು ಅಪಘಾತ, ಗಂಭೀರ ಗಾಯ

ಯಾವ ಯಾವ ಕೆರೆಗಳು ಏನೇನಾಗಿವೆ
ಮಾರೇನಹಳ್ಳಿ ಕೆರೆ ಮಾರೇನಹಳ್ಳಿ ಬಡಾವಣೆ
ಚಲ್ಲಘಟ್ಟ ಕೆರೆ ಕರ್ನಾಟಕ ಗಾಲï ಅಸೋಸಿಯೇಷನ್
ಸಿದ್ದಾಪುರ ಕೆರೆ ಸಿದ್ದಾಪುರ/ಜಯನಗರ 1ನೇ ಬ್ಲಾಕ್
ತುಮಕೂರು ಕೆರೆ ಮೈಸೂರು ಲ್ಯಾಂಪ್ಸ್
ಅಗಸನ ಕೆರೆ ಸರೋವರ ಗಾಯತ್ರಿ ದೇವಿ ಉದ್ಯಾನವನ
ಸಂಪಂಗಿರಾಮ ಕೆರೆ ಕಂಠೀರವ ಕ್ರೀಡಾಂಗಣ
ಧರ್ಮಾಂಬು ಕೆರೆ ಕೆಂಪೇಗೌಡ ಬಸ್ ನಿಲ್ದಾಣ
ಕೋರಮಂಗಲ ಕೆರೆ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ
ಹೊಸಕೆರೆ ವಸತಿ ರೈಲ್ವೆ ಸ್ಟಾಕ್ ಯಾರ್ಡ್
ಹೆಣ್ಣೂರು ಕೆರೆ ನಾಗವಾರ ಎಚ್ಬಿಆರ್ ಬಡಾವಣೆ
ಬಾಣಸವಾಡಿ ಕೆರೆ ಸುಬ್ಬಯ್ಯಪಾಳ್ಯ ವಿಸ್ತರಣೆ
ಸುಂಕಲ್ ಟ್ಯಾಂಕ್ ಕೆಎಸ್ಆರ್ಟಿಸಿಪ್ರಾದೇಶಿಕ ಕಾರ್ಯಾಗಾರ
ರಾಮಶೆಟ್ಟಿ ಪಾಳ್ಯ ಕೆರೆ ಮಿಲ್ಕ್ ಕಾಲೋನಿ (ಆಟದ ಮೈದಾನ)
ಚಿನ್ನಾಗರ ಕೆರೆ ಈಜಿಪುರ
ಗಂಗಶೆಟ್ಟಿ ಕೆರೆ ಮಿನರ್ವ ಮಿಲ್
ಜಕ್ಕರಾಯನ ಕೆರೆ ಕೃಷ್ಣಾ ಹಿಟ್ಟಿನ ಗಿರಣಿಗಳಾಗಿ
ಪರಿವರ್ತನೆಗೊಂಡಿವೆ.
ಶೂಲೆ ಟ್ಯಾಂಕ್ ಅಶೋಕ್ ನಗರ, ಫುಟ್ಬಾಲ್ ಕ್ರೀಡಾಂಗಣ
ಅಕ್ಕಿತಿಮ್ಮನಹಳ್ಳಿ ಟ್ಯಾಂಕ್ ಸಾಯಿ ಹಾಕಿ ಕ್ರೀಡಾಂಗಣ
ಚೆನ್ನಸಂದ್ರ ಕೆರೆ ಪುಲ್ಲೆ ರೆಡ್ಡಿ ಬಡಾವಣೆ
ಒಡ್ಡರಪಾಳ್ಯ ಕೆರೆ ರಾಜಾಜಿನಗರ (ಕೈಗಾರಿಕಾ ಪ್ರದೇಶ)

ಎಲ್ಲಿ ಒತ್ತುವರಿ ಇಲ್ಲ..
ನಗರದಲ್ಲಿರುವ 205 ಕೆರೆಗಳ ಪೈಕಿ ಬಹುತೇಕ ಎಲ್ಲ ಕೆರೆಗಳು ಒತ್ತುವರಿಯಾಗಿದ್ದರೂ ಕೇವಲ 11 ಕೆರೆಗಳನ್ನು ಮಾತ್ರ ಇದುವರೆಗೂ ಯಾರು ಒತ್ತುವರಿ ಮಾಡಿಕೊಂಡಿಲ್ಲ ಎನ್ನುವುದು ವಿಶೇಷ.
9.17 ಎಕರೆ ಪ್ರದೇಶದಲ್ಲಿರುವ ಗುಂಜೂರು ಕೆರೆ, 6.30 ಎಕರೆಯಷ್ಟಿರುವ ಪಣತೂರು, 36.27 ಎಕರೆಯಲ್ಲಿ ವಿಸ್ತಾರಗೊಂಡಿರುವ ಗುಂಜೂರು ಪಾಳ್ಯದ ಕೆರೆ, ಕಮ್ಮಗೊಂಡನಹಳ್ಳಿ ಕೆರೆ, ನಾಗರಭಾವಿ ಕೆರೆ, ಬೆಟ್ಟಹಳ್ಳಿ ಕೆರೆ, ಭೀಮನಕಟ್ಟೆ, ಕೆಂಚನಪುರ, ಗೊಟ್ಟಿಗೆರೆ ಪಾಳ್ಯ, ಬೆಳ್ಳಹಳ್ಳಿ ಕೆರೆಗಳು ಸೇರಿದಂತೆ 11 ಕೆರೆಗಳಲ್ಲಿ ಯಾವುದೇ ಒತ್ತುವರಿ ಕಂಡು ಬಂದಿಲ್ಲ.
ಈ 11 ಕೆರೆಗಳು ನಗರದ ಹೊರಭಾಗದಲ್ಲಿರುವುದರಿಂದ ಇದುವರೆಗೂ ಯಾರು ಒತ್ತುವರಿ ಮಾಡಿಕೊಂಡಿಲ್ಲ. ನಗರ ಬೆಳೆದಂತೆ ಈ ಕೆರೆಗಳನ್ನು ನುಂಗಣ್ಣರು ಒತ್ತುವರಿ ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಕಾರಿಗಳು ಗಮನಹರಿಸಬೇಕಿದೆ.

ಕಾಲ ಮಿಂಚಿಲ್ಲ
ಒಂದು ಕಾಲದಲ್ಲಿ ಜನರ ಜೀವನಾಡಿಗಳಾಗಿದ್ದ ಕೆರೆಗಳ ಕಣ್ಮರೆಯಿಂದಾಗಿಯೇ ಇಂದು ನಾವು ಹಲವಾರು ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಈಗಲೂ ಕಾಲ ಮಿಂಚಿಲ್ಲ ಕೆರೆ ಪ್ರದೇಶಗಳ ತಂಟೆಗೆ ಯಾರು ಹೋಗಬಾರದು, ಇರುವ ಕೆರೆಗಳನ್ನು ಪುನರುಜ್ಜೀವನಗೊಳಿಸಿ, ಒತ್ತುವರಿ ತೆರವು ಮಾಡಿ ನೀರು ಸರಾಗವಾಗಿ ಹರಿದುಹೋಗುವಂತೆ ರಚನಾತ್ಮಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೆ ಭವಿಷ್ಯದಲ್ಲಿ ಮಳೆ ಅನಾಹುತಗಳಿಂದ ಪಾರಾಗಬಹುದು. ಇಲ್ಲದಿದ್ದರೆ ಇನ್ನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಾಯವಾದ ಕೆರೆಗಳು…
ಬಸಪ್ಪನಕಟ್ಟೆ ಹಾಗೂ ಅಂಬುಲಿ ಕೆರೆಗಳು ಸಂಪೂರ್ಣವಾಗಿ ಒತ್ತುವರಿ ಆಗಿವೆ. ದಾಸರಹಳ್ಳಿ ವಲಯದ ಯಶವಂತಪುರ ಹೋಬಳಿಯ ಲಗ್ಗೆರೆಯಲ್ಲಿದ್ದ 4.11 ಎಕರೆಯ ಬಸಪ್ಪನಕಟ್ಟೆ ಕೆರೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಂದ 3.32 ಎಕರೆ ಹಾಗೂ ಖಾಸಗಿಯವರು 0.19 ಎಕರೆಯಷ್ಟು ಒತ್ತುವರಿ ಮಾಡಿಕೊಂಡಿರುವುದರಿಂದ ಕೇವಲ ದಾಖಲೆಗಳಲ್ಲಿ ಮಾತ್ರ ಬಸಪ್ಪನಕಟ್ಟೆ ಕೆರೆ ಎಂದು ದಾಖಲಾಗಿದೆ.

4.11 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಬಿಬಿಎಂಪಿಯವರೇ 2 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣ ಮಾಡಿದ್ದಾರೆ. ಒಂದು ಎಕರೆಯಲ್ಲಿ ಆಟದ ಮೈದಾನ, 14 ಗುಂಟೆಯಲ್ಲಿ ರಸ್ತೆ, ಸರ್ಕಾರಿ ಶಾಲೆ ಮತ್ತು ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಉಳಿದ ಕೆರೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಅದೇ ರೀತಿ, ಮಹದೇವಪುರದ ಅಂಬಲಿಪುರದ 4.09 ಎಕರೆ ವಿಸ್ತೀರ್ಣದ ಕೆರೆಯನ್ನು ಕಾಪಾಡಿಕೊಳ್ಳಬೇಕಾದ ಬಿಬಿಎಂಪಿಯವರೇ ಒತ್ತುವರಿ ಮಾಡಿ ಬೃಹತ್ ಉದ್ಯಾನವನ ನಿರ್ಮಿಸಿದ್ದಾರೆ. ಹೀಗಾಗಿ ಈ ಎರಡು ಕೆರೆಗಳು ಇತಿಹಾಸದಲ್ಲಿ ಇದ್ದವು ಎನ್ನುವುದಕ್ಕೆ ಕುರುಹುಗಳು ದೊರೆಯದಂತಾಗಿದೆ.

#ರಮೇಶ್ ಪಾಳ್ಯ

Articles You Might Like

Share This Article