ಬೆಂಗಳೂರು, ಫೆ.15- ನೀರಿನ ಲಭ್ಯತೆ ಆಧಾರದ ಮೇಲೆ ಸರ್ಕಾರ ಕೆರೆಗಳಿಗೆ ನೀರು ತುಂಬಿಸಲಿದ್ದು ನೀರಿನ ಸಂಪನ್ಮೂಲ ಇಲ್ಲದಿದ್ದರೆ ತುಂಬಿಸಲು ಸಾಧ್ಯವೇ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ವಿಧಾನಸಭೆಯಲ್ಲಿಂದು ತಿಳಿಸಿದರು. ಎಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆಯೋ ಅದನ್ನು ಬಳಸಿಕೊಂಡು ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ನೀರು ಲಭ್ಯವಿಲ್ಲದಿದ್ದರೆ ಸರ್ಕಾರ ಏನು ಮಾಡಲು ಸಾಧ್ಯವಿಲ್ಲ ಎಂದರು.
ಶಾಸಕ ನಾಗೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋಲಾರ ಜಿಲ್ಲೆಯಲ್ಲಿ ಒಟ್ಟು 3000 ಕೆರೆಗಳಿಗೆ ಎಲ್ಲಿ ಯಥೇಚ್ಚ ನೀರು ಇದೆಯೋ ಅದನ್ನು ಬಳಕೆ ಮಾಡಿಕೊಂಡು ಕೆರೆ ತುಂಬಿಸುತ್ತಿದ್ದೇವೆ. ಎಲ್ಲಾ ಕೆರೆಗಳಿಗೂ ನೀರು ತುಂಬಿಸಲು ಸಾಧ್ಯವೇ ಇಲ್ಲ ಎಂದರು.
ಮುಳಬಾಗಿಲು ತಾಲೂಕಿನಲ್ಲಿ ಒಟ್ಟು 584 ಕೆರೆಗಳಿದ್ದು ಕೆಸಿ ವ್ಯಾಲಿ ಯೋಜನೆಯಡಿ ಮೊದಲ ಹಂತದಲ್ಲಿ ನೀರಿನ ಲಭ್ಯತೆಗೆ ಅನುಸಾರವಾಗಿ 31 ಕೆರೆಗಳನ್ನು ತುಂಬಿಸಲಾಗಿದೆ ಎಂದರು. ಮೊದಲ ಹಂತದಲ್ಲಿ ಕೆಸಿ ವ್ಯಾಲಿ ಯೋಜನೆಯಡಿ 400 ಎಂಎಲ್‍ಡಿ ನೀರನ್ನು ಚಿಂತಾಮಣಿಯ 124 ಕೆರೆಗಳಿಗೆ ತುಂಬಿಸಲಾಗಿದೆ. ಎರಡನೆ ಹಂತದಲ್ಲಿ 400 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಟೆಂಡರ್ ಕರೆಯಲಾಗಿದೆ.
