ಲಖೀಂಪುರ್‌ಖೇರಿ,ಸೆ.15-ಉತ್ತರಪ್ರದೇಶದ ಲಖೀಂಪುರ್‌ಖೇರಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ವೆಸಗಿ ಕೊಲೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಲಖೀಂಪುರ್‌ಖೇರಿಯಲ್ಲಿ ಬಾಲಕಿಯರ ಮನೆಗೆ ನುಗ್ಗಿದ ಆರೋಪಿಗಳು ಮೋಟಾರ್‍ಸೈಕಲ್‍ನಲ್ಲಿ ಅಪಹರಿಸಿ ಅತ್ಯಾಚಾರವೆಸಗಿದ್ದಾರೆ. ನಂತರ ಕೊಲೆ ಮಾಡಿ ಮನೆಯಿಂದ 1 ಕಿ.ಮೀ ದೂರದಲ್ಲಿರುವ ಕಬ್ಬಿನ ತೋಟದಲ್ಲಿನ ಮರವೊಂದಕ್ಕೆ ನೇಣು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅಪ್ರಾಪ್ತ ದಲಿತ ಬಾಲಕಿಯರ ತಾಯಿ ನೀಡಿರುವ ದೂರು ಆಧರಿಸಿ ನಿಗಾಸನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯರು ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೋಟು, ಸುಹಾಯಿಲ್, ಜುನೈಲ್, ಆರೀಫ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಗುರುತಿಸಿದ್ದು, ವಶಕ್ಕೆ ಪಡೆಯಲಾಗಿದೆ.
ಪೊಲೀಸರ ಕಾರ್ಯಚರಣೆ ವೇಳೆ ಆರೋಪಿಗಳು ಪ್ರತಿ ದಾಳಿ ನಡೆಸಿದ್ದರಿಂದ ಗುಂಡು ಹಾರಿಸಲಾಗಿದೆ. ಇದರಲ್ಲಿ ಒಬ್ಬ ಗಾಯಗೊಂಡಿದ್ದಾನೆ. ಸಂತ್ರಸ್ತ ಬಾಲಕಿಯರು ಚೋಟು ಅವರ ನೆರೆಯ ವಾಸಿಗಳು ಎಂದು ಹೇಳಲಾಗಿದೆ.
ಘಟನೆಯನ್ನು ಖಂಡಿಸಿರುವ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಉತ್ತರಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿವೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಇಬ್ಬರು ದಲಿತ ಬಾಲಕಿಯರನ್ನು ಅತ್ಯಾಚಾರ ವೆಸಗಿ ಕೊಲೆ ಮಾಡಿರುವುದು ದುರಂತ ಘಟನೆ. ಆದರೆ ಪ್ರಕರಣದಲ್ಲಿ ಪಂಚನಾಮೆ ಮತ್ತು ಶವ ಪರೀಕ್ಷೆ ನಡೆಸದೆ ನಿರ್ಲಕ್ಷಿಸಲಾಗಿದೆ. ಮತ್ತೊಮ್ಮೆ ಹತ್ರಾಸ್‍ನ ಪ್ರಕರಣ ಮರುಕಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಸ್‍ಪಿಯ ಮಾಯವತಿಯವರು ಘಟನೆ ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ವಿಷಯ. ಉತ್ತರಪ್ರದೇಶದಲ್ಲಿ ಕ್ರಿಮಿನಲ್‍ಗಳಿಗೆ ಭಯವಿಲ್ಲ. ತಪ್ಪು ಮಾಡಿದರೂ ಸರ್ಕಾರ ರಕ್ಷಿಸುತ್ತದೆ ಎಂಬ ಭಾವನೆಯಲ್ಲಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತು ಮಹಿಳೆಯರ ಸುಕ್ಷರತೆ ಕುಸಿದಿದೆ. ಸರ್ಕಾರ ತನ್ನ ಆದ್ಯತೆ ಹಾಗೂ ಕಾರ್ಯ ವಿಧಾನಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಹಾಡಹಗಲೇ ಹತ್ಯೆಗೈದಿರುವುದು ಆತಂಕಕಾರಿ. ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿ ಗೌರವಿಸುವವರಿಂದ ಮಹಿಳೆಯರ ಸುರಕ್ಷತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ನಾವು ದೇಶದಲ್ಲಿ ಸುರಕ್ಷಿತ ವಾತಾವರಣವನ್ನು ಕಲ್ಪಿಸಬೇಕಿದೆ ಎಂದಿದ್ದಾರೆ.