ಬೆಂಗಳೂರು,ಆ.15- ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಲಾಲ್‍ಬಾಗ್‍ನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಇಂದು ಜನಸಾಗರವೇ ಹರಿದುಬಂದಿದೆ. ಅಮೃತ ಮಹೋತ್ಸವದ ನಿಮಿತ್ತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯವರು ಇಂದು ಬಸ್‍ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಮಾಡಿರುವುದರಿಂದ ನಗರದ ಮೂಲೆ ಮೂಲೆಗಳಿಂದ ಲಾಲ್‍ಬಾಗ್‍ನತ್ತ ಜನರ ದಂಡೇ ಹರಿದುಬಂದಿತ್ತು.
ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘ ಹಮ್ಮಿಕೊಂಡಿರುವ ವರನಟ ಡಾ.ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ ಬೀಳುವ ಹಿನ್ನಲೆಯಲ್ಲಿ ಕೆಂಪುತೋಟ ಜನರಿಂದ ತುಂಬಿ ತುಳುಕುತ್ತಿದೆ.
ಕೊರೊನಾ ಕಾಟದಿಂದ ಕಳೆದ ಎರಡು ವರ್ಷಗಳಿಂದ ಫಲಪುಷ್ಪ ಪ್ರದರ್ಶನ ನಡೆದಿರಲಿಲ್ಲ. ಕಳೆದ 5ರಿಂದ ಆರಂಭವಾದ ಪ್ರದರ್ಶನಕ್ಕೆ ಮಳೆ ಕಾಟ ಇದ್ದ ಪರಿಣಾಮ ಮೊದಲ ಒಂದೇರಡು ದಿನ ಜನ ಬಂದಿರಲಿಲ್ಲ. ಮಳೆ ಕಾಟ ಮುಗಿಯುತ್ತಿದ್ದಂತೆ ಲಾಲ್‍ಬಾಗ್‍ಗೆ ಜನ ಮುಗಿಬೀಳುತ್ತಿದ್ದಾರೆ. ಅದರಲ್ಲೂ ಶನಿವಾರ ಮತ್ತು ಭಾನುವಾರಗಳಂದು ಸಾವಿರಾರು ಮಂದಿ ಲಾಲ್‍ಬಾಗ್‍ಗೆ ದೌಡಾಯಿಸುತ್ತಿದ್ದಾರೆ.ಆ.5 ರಿಂದ ನಿನ್ನೆಯವರೆಗೆ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಫಲಪುಷ್ಪ ಪ್ರದರ್ಶನಕ್ಕೆ ಕೊನೆ ದಿನವಾಗಿರುವ ಹಿನ್ನಲೆಯಲ್ಲಿ ಇಂದು ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳಿವೆ. ಶಾಲಾ ವಿದ್ಯಾರ್ಥಿಗಳು, ಮಕ್ಕಳು ಪೋಷಕರು ಸೇರಿದಂತೆ ಸಾವಿರಾರು ಮಂದಿ ಬರುತ್ತಿರುವುದರಿಂದ ಲಾಲ್‍ಬಾಗ್ ಗೇಟ್‍ನಲ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್‍ಗಳನ್ನು ತೆರೆಯಲಾಗಿದೆ.
10ನೇ ತರಗತಿ ಒಳಗಿನ ಮಕ್ಕಳು ಶಾಲಾ ಸಮವಸ್ತ್ರ ಧರಿಸಿ ಗುರುತಿನ ಚೀಟಿಯೊಂದಿಗೆ ಆಗಮಿಸಿದರೆ ಉಚಿತ ಪ್ರವೇಶ ಎಂದು ಘೋಷಣೆ ಮಾಡಿರುವುದರಿಂದ ಸಾವಿರಾರು ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಬಂದಿದ್ದಾರೆ. ಶಾಲಾ ಮಕ್ಕಳ ಜೊತೆಗೆ ಜನರು ಕುಟುಂಬ ಸದಸ್ಯರೊಂದಿಗೆ ಪ್ರದರ್ಶನಕ್ಕೆ ಆಗಮಿಸಿ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಒಟ್ಟಾರೆ, ಲಾಲ್‍ಬಾಗ್ ಜನಜಂಗುಳಿಯಿಂದ ತುಂಬಿತುಳುಕುತ್ತಿದ್ದು, ಇದೇ ಮೊದಲ ಬಾರಿಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಫಲಪುಷ್ಪಪ್ರದರ್ಶನ ವೀಕ್ಷಿಸುವ ಮೂಲಕ ಇತಿಹಾಸ ನಿರ್ಮಿಸುವ ಸಾಧ್ಯತೆಗಳಿವೆ.
ತುಂಬಿ ತುಳುಕುತ್ತಿರುವ ಬಸ್‍ಗಳು: ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಇಂದು ಬಿಎಂಟಿಸಿ ಬಸ್‍ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿರುವುದರಿಂದ ಬಸ್‍ಗಳಲ್ಲಿ ಪ್ರಯಾಣಿಕರ ದಂಡೇ ಕಂಡು ಬರುತ್ತಿದೆ. ಮೆಜೆಸ್ಟಿಕ್ ಮತ್ತಿತರ ಪ್ರದೇಶಗಳಲ್ಲಿ ಬಸ್‍ಗಳ ಸಂಖ್ಯೆ ವಿರಳವಾಗಿರುವುದರಿಂದ ಜನ ಸಿಕ್ಕ ಸಿಕ್ಕ ಬಸ್‍ಗಳನ್ನು ಹತ್ತಿ ಪ್ರಯಾಣ ಬೆಳೆಸುತ್ತಿರುವುದರಿಂದ ನಗರದಲ್ಲಿ ಬಸ್‍ಗಳೆಲ್ಲಾ ರಷೋ..ರಷ್.