ಬೆಂಗಳೂರು,ಆ.3- ಲಾಲ್‍ಬಾಗ್‍ನಲ್ಲಿ 1912 ರಿಂದ ನಡೆಸಲಾಗುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಕರ್ನಾಟಕ ರತ್ನ ಡಾ. ರಾಜ್‍ಕುಮಾರ್ ಮತ್ತು ಡಾ. ಪುನೀತ್ ರಾಜ್‍ಕುಮಾರ್ ಥೀಮ್‍ನೊಂದಿಗೆ ಆಯೋಜಿಸುತ್ತಿರುವುದು ವಿಶೇಷ ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದರು.
ಆ.5ರಿಂದ ಪ್ರಾರಂಭವಾಗಿ ಈ ಫಲಪುಷ್ಪ ಪ್ರದರ್ಶನ 15 ರಂದು ಮುಕ್ತಾಯಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಆಗಸ್ಟ್ 5 ರಂದು ಬೆಳಿಗ್ಗೆ 11 ಗಂಟೆಗೆ ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಉದಯ್ ಬಿ.ಗರುಡಾಚಾರ್ ವಹಿಸಲಿದ್ದಾರೆ, ಖ್ಯಾತ ನಟರಾದ ಡಾ.ಶಿವ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಮತ್ತು ಅಶ್ವಿನಿ ಪುನೀತ್‍ರಾಜ್‍ಕುಮಾರ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ದೇಶವಷ್ಟೇ ಅಲ್ಲ, ಜಗತಿನಲ್ಲೆ ದಾಖಲೆ ನಿರ್ಮಿಸಿದೆ. ತೋಟಗಾರಿಕಾ ಇಲಾಖೆ ಮೈಸೂರು ತೋಟಗಾರಿಕಾ ಸೊಸೈಟಿಯ ಸಹಯೋಗದಲ್ಲಿ ವರ್ಷಕ್ಕೆ ಎರಡು ಬಾರಿ ಪುಷ್ಪ ಪ್ರದರ್ಶನ ಆಯೋಜನೆ ಮಾಡುತ್ತಾ ಬರಲಾಗಿದೆ ಎಂದು ತಿಳಿಸಿದರು.
ಮೊದಲು ಈ ಪ್ರದರ್ಶನವನ್ನು ಬೇಸಿಗೆ ಮತ್ತು ಚಳಿಗಾಲದ ಪ್ರದರ್ಶನ ಎಂದು ವಿಂಗಡಿಸಲಾಗಿತ್ತು. ಅದೇ ರೀತಿಯಲ್ಲಿ ಈ ವರ್ಷ 212ನೇ ಪ್ರದರ್ಶನವಾಗಿದ್ದು, ಸ್ವಾತಂತ್ರ್ಯ ದಿನಾಚರಣೆಗೆ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಎ.ದೇವೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಎಲ.ಎನ್.ಎಸ್.ಪ್ರಸಾದ್, ರಾಜೇಂದರ್ ಕುಮಾರ್ ಕಟಾರಿಯಾ ವಿಶೇಷ ಅತಿಥಿಗಳಾಗಿ ಭಾಗವಹಿಸುವರು .
ಪುಷ್ಪ ಪ್ರದರ್ಶನದ ಅಂಗವಾಗಿ ಆ.6 ಮತ್ತು 7 ರಂದು ಕುಂಡದಲ್ಲಿ ಹೂವಿನ ಗಿಡಗಳ ಪ್ರದರ್ಶನ, ಇಕೆಬಾನಾ , ಹೂವಿನ ಕಲೆ, ಬೋನ್ಸಾಲ್, ತರಕಾರಿ ಕೆತ್ತನೆ, ಥಾಯ್ ಕಲೆ ಮತ್ತು ಅಲಂಕಾರಿಕ ತೋಟಗಾರಿಕೆ ಸ್ಪರ್ಧೆಗಳು ಸಹ ನಡೆಯಲಿದೆ.
ಆಗಸ್ಟ್ 5, ರಂದು ಬೆಳಿಗ್ಗೆ 8 ಗಂಟೆಗೆ ಡಾ. ರಾಜ್‍ಕುಮಾರ್ ಮತ್ತು ಡಾ. ಪುನೀತ್ ರಾಜ್‍ಕುಮಾರ್ ಅವರ ಟಾರ್ಚ್ (ಇಮ್ಮಾರ್ಟಲ್ ಲೆಜೆಂಡ್ಸ ಫ್ಲೇಮ) ಜೊತೆಗೆ ಸೈಕಲ್ ರ್ಯಾಲಿ ನಡೆಯಲಿದೆ. ಈ ರ್ಯಾಲಿ ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಿ ಲಾಲ್‍ಬಾಗ್‍ನಲ್ಲಿ ಕೊನೆಗೊಳ್ಳಲಿದೆ.
ಟ್ರಾಫಿಕ್ ಜಾಮ್: ಲಾಲ್ ಭಾಗ್ ನ ನಾಲ್ಕು ದಿಕ್ಕು ಓಪನ್ ಇರುತ್ತೆ. ಪಾರ್ಕಿಂಗ್ ವ್ಯವಸ್ಥೆಗೂ ಸಮಸ್ಯೆ ಆಗಲ್ಲ. ಸಮಸ್ಯೆ ಆಗದೇ ಇರೋ ರೀತಿ ವ್ಯವಸ್ಥೆ ಮಾಡ್ತೀವಿ ಎಂದು ಮಾಹಿತಿ ನೀಡಿದರು.