ಬೆಂಗಳೂರು, ಜ.8- ಗಣರಾಜ್ಯೋತ್ಸವ ದಿನದಂದು ರೈತರ ಮನೆ ಬಾಗಿಲಿಗೆ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ತಲುಪಿಸಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ.ಕಂದಾಯ ದಾಖಲೆ ಮನೆ ಬಾಗಿಲಿಗೆ ಎಂಬ ಯೋಜನೆಯನ್ನು ಹಮ್ಮಿಕೊಂಡಿದ್ದು, ಜ.26ರಂದು ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಸರ್ಕಾರ ಉದ್ದೇಶಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಮಟ್ಟದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದು, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು ಚಾಲನೆ ನೀಡಲಿದ್ದಾರೆ.
ರೈತರ ಹಕ್ಕನ್ನು ನಿರ್ಧರಿಸುವ ಮೂಲ ಕಂದಾಯ ದಾಖಲೆಗಳಾದ ಪಹಣಿ, ಅಟ್ಲಾಸ್, ಭೂಮಿ ಮತ್ತು ನೋಂದಣಿ ತಂತ್ರಾಂಶದಲ್ಲಿ ಅಳವಡಿಕೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ಇ-ತಂತ್ರಾಂಶದಲ್ಲಿ ಲಭ್ಯವಿವೆ. ಇ-ಆಡಳಿತ ಇಲಾಖೆಯಿಂದ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕುಟುಂಬವಾರು ಪಡೆದು ಜತೆಗೆ ಭೂ ದಾಖಲೆಗಳನ್ನು ರೈತರ ಮನೆಬಾಗಿಲಿಗೆ ತಲುಪಿಸಲು ಉದ್ದೇಶಿಸಲಾಗಿದೆ.
ಕಂದಾಯ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಹಾಗೂ ಭೂಮಾಪನಾ ಮತ್ತು ಭೂ ದಾಖಲೆಗಳ ಆಯುಕ್ತರಿಗೆ ಈ ಸಂಬಂಧ ನಿರ್ದೇಶನ ನೀಡಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ.
ದಾಖಲೆಗಳ ಮುದ್ರಣಕ್ಕೆ ಸ್ಥಳೀಯವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಲ್ಪಾವ ಟೆಂಡರ್ ಕರೆದು ಮುದ್ರಣ ಕಾರ್ಯವನ್ನು ತ್ವರಿತವಾಗಿ ಮುಗಿಸಬೇಕು. ಜ.15ರೊಳಗೆ ದಾಖಲೆಗಳನ್ನು ಮುದ್ರಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲು ಸೂಚಿಸಲಾಗಿದೆ.
ಉಪವಿಭಾಗಾಕಾರಿಗಳು, ತಹಸೀಲ್ದಾರ್, ಉಪತಹಸೀಲ್ದಾರ್ ಜವಾಬ್ದಾರಿ ನಿರ್ವಹಣೆ ಮಾಡಿ ಕಂದಾಯ ಇಲಾಖೆ ಮೂಲಕ ಆಯಾ ಗ್ರಾಮದ ರೈತರ ಮನೆ ಬಾಗಿಲಿಗೆ ದಾಖಲೆ ಸಲ್ಲಿಕೆಯಾಗುವಂತೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.
