ಬೆಂಗಳೂರು,ಫೆ.26-ಕೆರೆ ಏರಿ ಒತ್ತುವರಿ ತೆರವುಗೊಳಿಸಿರುವ ಬಿಬಿಎಂಪಿ ಅಧಿಕಾರಿಗಳು ಆರು ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಜಾಗವನ್ನು ವಶಪಡಿಸಿಕೊಂಡಿದ್ದಾರೆ. ಯಲಹಂಕ ವಲಯದ ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ಭದ್ರಪ್ಪ ಲೇಔಟ್ ಮುಖ್ಯರಸ್ತೆ ಇಕ್ಕೆಲುಗಳಲ್ಲಿದ್ದ ಕೊಡಿಗೆಹಳ್ಳಿ ಗ್ರಾಮದ ಸರ್ವೆ ನಂಬರ್ 46 ಮತ್ತು 47ರಲ್ಲಿದ ಹತ್ತು ಗುಂಟೆ ಕೆರೆ ಏರಿ ಪ್ರದೇಶವನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದರು.
ಸರ್ಕಾರದ ಕೆರೆ ಏರಿ ಒತ್ತುವರಿ ಮಾಡಿರುವುದನ್ನು ಭೂದಾಖಲೆಗಳ ನಿರ್ದೇಶಕರು ದೃಢಪಡಿಸಿದ್ದರು. ಭೂದಾಖಲೆಗಳ ನಿರ್ದೇಶಕರು ನೀಡಿದ ನಕ್ಷೆ ಆಧರಿಸಿ ಕಾರ್ಯಚರಣೆಗೆ ಇಳಿದ ಯಲಹಂಕ ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ ನೇತೃತ್ವದ ಬಿಬಿಎಂಪಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿದೆ.
ಒತ್ತುವರಿಯಾಗಿದ್ದ 10 ಗುಂಟೆ ಜಮೀನಿನ ಬೆಲೆ ಪ್ರಸ್ತುತ ಮಾರುಕಟ್ಟೆ ಮೌಲ್ಯದಲ್ಲಿ 6,27,26,400 ರೂ.ಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
