ಬೆಂಗಳೂರು, ಜು.10- ಮಲೆನಾಡು ಹಾಗೂ ಕರಾವಳಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಮಾರ್ಗವಾದ ಆಗುಂಬೆ ಘಾಟ್ನಲ್ಲಿ ಭೂಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿದೆ. ಈ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಭೇಟಿ ನೀಡಿ ಪರಿಶೀಲಿಸಿ ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಲಹೆ-ಸೂಚನೆ ನೀಡಿದರು.
ತೀವ್ರ ಮಳೆಯಿಂದಾಗಿ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ. ಘಾಟ್‍ನ ಹನ್ನೊಂದು ಹಾಗೂ ಹನ್ನೆರಡನೆ ತಿರುವಿನಲ್ಲಿ ಉಂಟಾದ ಬಿರುಕು ಹಾಗೂ ಭೂಕುಸಿತವನ್ನು ವೀಕ್ಷಿಸಿದ ಗೃಹ ಸಚಿವರು ಶೀಘ್ರವಾಗಿ ದುರಸ್ತಿ ಕಾಮಗಾರಿ ಕೈಗೊಂಡು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭೂಕುಸಿತ ಉಂಟಾಗಿರುವುದರಿಂದ ಆಗುಂಬೆ ಘಾಟ್ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಕುಸಿದಿರುವ ಮಣ್ಣು ತೆರವುಗೊಳಿಸುವ ಕಾರ್ಯ ಕೈಗೊಂಡಿದೆ.
ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಇಂತಹ ಭೂಕುಸಿತವಾಗಿದೆ. ಇದು ಸರಿಹೋಗದಿದ್ದರೆ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆ ನಡುವಿನ ಸಂಪರ್ಕವೇ ಕಡಿದುಹೋಗಲಿದೆ. ಈ ಮಾರ್ಗವನ್ನು ಸಮರ್ಪಕವಾಗಿ ಸರಿಪಡಿಸಲು ಅನುಕೂಲವಾಗುವಂತೆ ಸರ್ವೆ ಕೈಗೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ 50 ಲಕ್ಷ ರೂ. ಮಂಜೂರಾಗಿದೆ ಎಂದು ಹೇಳಿದರು.
ಮತ್ತೆ ಭೂಕುಸಿತವಾಗುವ ಸಂಭವವಿರುವುದರಿಂದ ಸದ್ಯಕ್ಕೆ ಈ ಮಾರ್ಗದಲ್ಲಿ ವಾಹನ ಸಂಚಾರ ಮಾಡುವುದು ಅಪಾಯಕಾರಿಯಾಗಿದೆ. ಮಳೆ ನಿಂತು ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಿದ ನಂತರವೇ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಸೂಕ್ತ ಎಂದರು.