ಮ್ಯಾನೇಜರ್​ಗೆ ಬುದ್ದಿಕಲಿಸಲು ಲ್ಯಾಪ್‍ಟಾಪ್‍ಗಳ ಕಳ್ಳತನ ನೌಕರ ಅರೆಸ್ಟ್

Spread the love

ಬೆಂಗಳೂರು, ಮೇ 28- ಹೆಚ್ಚಿನ ಕೆಲಸ ನಿರ್ವಹಿಸಲು ಸೂಚಿಸಿದ ಕಂಪೆನಿಯ ಮ್ಯಾನೇಜರ್‍ಗೆ ಬುದ್ದಿಕಲಿಸಲು ಇಬ್ಬರ ಜೊತೆ ಸೇರಿ ಲ್ಯಾಪ್‍ಟಾಪ್‍ಗಳನ್ನು ಕಳವು ಮಾಡಿದ್ದ ನೌಕರನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಎರಡು ಲಕ್ಷ ರೂ. ಮೌಲ್ಯದ ಡೆಲ್ ಕಂಪೆನಿಯ 8 ಲ್ಯಾಪ್‍ಟಾಪ್‍ಗಳು, ಲೆದರ್‍ಬ್ಯಾಗ್, ಹೆಡ್‍ಸೆಟ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋರಮಂಗಲದ 5ನೇ ಬ್ಲಾಕ್, 4ನೇ ಬಿ ಮುಖ್ಯರಸ್ತೆಯಲ್ಲಿರುವ ವೇಕ್‍ಫಿಟ್ ಇನ್ನೋವೇಷನ್ ಪ್ರೈ.ಲಿ.ಕಂಪೆನಿಯ ತರಬೇತಿ ವಿಭಾಗದಲ್ಲಿ 8 ಡೆಲ್ ಕಂಪೆನಿಯ ಲ್ಯಾಪ್‍ಟಾಪ್‍ಗಳು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಮೇ 23ರಂದು ಮಧ್ಯಾಹ್ನ 1.30ರಿಂದ 2.30ರ ನಡುವೆ ಕಳ್ಳತನವಾಗಿದೆ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ ಮಹದೇವ ಜೋಷಿ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುೀರ್ ಎಂ.ಹೆಗಡೆ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ನಟರಾಜ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಈ ತಂಡ ಕಾರ್ಯಾಚರಣೆ ಕೈಗೊಂಡು ಘಟನಾ ಸ್ಥಳದ ಸುತ್ತಮುತ್ತಲ ರಸ್ತೆಗಳಲ್ಲಿನ ಎಲ್ಲಾ ಸಿಸಿ ಟಿವಿ ಕ್ಯಾಮೆರಾಗಳ ವಿಡಿಯೋ ಪುಟೇಜ್‍ಗಳನ್ನು ವೀಕ್ಷಿಸಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ.

ತಮ್ಮ ಕಂಪೆನಿಯ ಮ್ಯಾನೇಜರ್ ಹೆಚ್ಚಿನ ಕೆಲಸ ನಿರ್ವಹಿಸಲು ಸೂಚಿಸಿದ್ದರಿಂದ ಕೋಪಗೊಂಡು ಅವರಿಗೆ ಬುದ್ದಿ ಕಲಿಸಲು ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ. ತಂಡದ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿರುತ್ತಾರೆ.

Facebook Comments