ಬೆಂಗಳೂರು, ಸೆ.20-ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ 15 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ವಿವಿಧ ಕಾರಣಗಳಿಗೆ ಮುಚ್ಚಲ್ಪಟ್ಟಿವೆ. ಇದರಿಂದ 2086 ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಧಾನ ಪರಿಷತ್ ನ ಪ್ರಶ್ನೋತ್ತರದ ವೇಳೆಯಲ್ಲಿ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೈಗಾರಿಕೆಗಳು ಕಚ್ಚಾ ಮಾಲಿನ ಕೊರತೆ, ಹಣಕಾಸಿನ ತೊಂದರೆ, ಕಾರ್ಮಿಕರ ಸಮಸ್ಯೆಗಳನ್ನು ಎದರಿಸುತ್ತಿದ್ದರೆ, ಅಂತಹ ಕೈಗಾರಿಕೆಗಳು ಬಯಸಿದ್ದಲ್ಲಿ ಸರ್ಕಾರ ನೆರವು ನೀಡಲು ಸಿದ್ಧವಿದೆ ಎಂದು ಹೇಳಿದರು.
ಇದನ್ನೂ ಓದಿ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ
ರಾಜ್ಯ ಸರ್ಕಾರ ವ್ಯವಹಾರ ಸುಗಮಗೊಳಿಸಲು ಅಗತ್ಯ ಮಾರ್ಪಾಡು ಮಾಡಲು ನಿರ್ಧರಿಸಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದರು. ರುದ್ರೇಗೌಡರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಐಎಡಿಬಿಯಿಂದ ರಾಜ್ಯದಲ್ಲಿ ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶದಲ್ಲಿ ಹಂಚಿಕೆ ಪಡೆದು ಯೋಜನೆ ಅನುಷ್ಠಾನಗೊಳಿಸದ 9572.63 ಎಕರೆ ಬಾಕಿ ಇದೆ. ಇದಕ್ಕಾಗಿ 117 ಉದ್ದಿಮೆದಾರರಿಗೆ ನಿಯಮ 34 ಬಿ ಅಡಿ ನೋಟಿಸ್ ನೀಡಲಾಗಿದೆ ಎಂದರು.
ಖಾಲಿ ಇರುವ ಭೂಮಿಯಲ್ಲಿ 7500 ಎಕರೆ ಸ್ಟೀಲ್ ಉದ್ದಿಮೆಗಳಿಗೆ ಸಂಬಂಧಿಸಿದೆ. ಅದಿರು ಮಂಜೂರಾಗದ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಆರಂಭವಾಗಿಲ್ಲ. ಉಳಿದಂತೆ ಇತರ ಉದ್ದಿಮೆದಾರರಿಂದ ಭೂಮಿ ಹಿಂಪಡೆಯಲು ಮತ್ತು ಬದಲು ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 20 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಮೈಸೂರಿನಲ್ಲಿ ಸೆಮಿಕಂಡಕ್ರ್ಟ ಉತ್ಪಾದನಾ ವಲಯ ಸ್ಥಾಪನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ 15 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ ಎಂದರು.
ಕಳೆದ ವಾರ ಅಮೆರಿಕಾಕ್ಕೆ ಭೇಟಿ ನೀಡಿದಾಗ, ಸೆಮಿಕಂಡಕ್ರ್ಟ ಕೇಂದ್ರಕ್ಕೆ ಆಧುನಿಕ ಯಂತ್ರೋಪಕರಣ ಒದಗಿಸಲು ಮನವಿ ಮಾಡಲಾಗಿದೆ. ಬೆಂಗಳೂರು ಹೊರತು ಪಡಿಸಿ ರಾಜ್ಯದ ಇತರ ಭಾಗಗಳಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗಗೆ ಆದ್ಯತೆ ನೀಡಲಾಗುತ್ತಿದ್ದು ಎಂದರು. ಸರ್ಕಾರದ ಕಾಳಜಿಗೆ ಸದಸ್ಯರು ಅಭಿನಂದನೆ ಸಲ್ಲಿಸಿದರು.