ಕಳೆದ 40 ದಿನಗಳಲ್ಲಿ ಶೇ.86ರಷ್ಟು ಮಂದಿಗೆ ಕೊರೋನಾ ಪತ್ತೆ..!

ನವದೆಹಲಿ, ಜೂ.10- ದೇಶದಲ್ಲಿ ಕಿಲ್ಲರ್ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಮತ್ತೊಂದು ಆಘಾತಕಾರಿ ವಿದ್ಯಮಾನವೆಂದರೆ ಕೇವಲ 40 ದಿನಗಳಲ್ಲೇ ಶೇ.86ರಷ್ಟು ಪ್ರಕರಣಗಳು ಪತ್ತೆಯಾಗಿದೆ.  ಮೇ 1 ರಿಂದ ಕೇವಲ ಜೂನ್ 10ರವರೆಗೆ 40 ದಿನಗಳ ಅವಧಿಯಲ್ಲಿ 2,29,000ಕ್ಕೂ ಹೆಚ್ಚು ಕೋವಿಡ್-19 ಕೇಸ್‍ಗಳು ವರದಿಯಾಗಿವೆ.

ಮೇ ಮತ್ತು ಜೂನ್ ತಿಂಗಳ 40 ದಿನಗಳ ಅವಧಿಯಲ್ಲಿ ಸೋಂಕು ಕಾಣಿಸಿಕೊಂಡ ರೋಗಿಗಳಲ್ಲಿ ಶೇ.84 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.ಮೇ ತಿಂಗಳು ಭಾರತಕ್ಕೆ ಕೊರೊನಾ ಅತ್ಯಂತ ಆತಂಕ ಉಂಟು ಮಾಡಿತ್ತು. 31 ದಿನಗಳ ಅವಧಿಯಲ್ಲಿ 1,53,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜೂನ್‍ನಲ್ಲಿ ಕೇವಲ 10 ದಿನಗಳಲ್ಲೇ 76,000ಕ್ಕೂ ಅಧಿಕ ಕೇಸ್‍ಗಳು ಪತ್ತೆಯಾಗಿವೆ.

ಭಾರತದಲ್ಲಿ 10 ಅತ್ಯಧಿಕ ಸೋಂಕಿನ ರಾಜ್ಯಗಳನ್ನೂ ಗುರುತಿಸಲಾಗಿದ್ದು, ಕರ್ನಾಟಕ ಒಂಭತ್ತನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ(90.797), ತಮಿಳುನಾಡು(34,914), ದೆಹಲಿ (31,309), ಗುಜರಾತ್(21,014), ಉತ್ತರ ಪ್ರದೇಶ(11,335), ರಾಜಸ್ತಾನ(11,245), ಮಧ್ಯಪ್ರದೇಶ(9,849), ಪಶ್ಚಿಮ ಬಂಗಾಳ (8,985), ಕರ್ನಾಟಕ(5,921), ಮತ್ತು ಬಿಹಾರ(5,459), ಅನುಕ್ರಮವಾಗಿ ಟಾಪ್ ಟೆನ್ ಅತ್ಯಧಿಕ ಸೋಂಕು ಪೀಡಿತ ರಾಜ್ಯಗಳಾಗಿವೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಈ 10 ರಾಜ್ಯಗಳು ದೇಶದಲ್ಲಿ ಈವರೆಗೆ ಸಂಭವಿಸಿರುವ ಸಾವಿನ ಪ್ರಮಾಣದಲ್ಲಿ ಶೇ.95 ಹಾಗೂ ಸೋಂಕು ಪ್ರಕರಣದಲ್ಲಿ ಶೇ.84ರಷ್ಟು ಪಾಲು ನೀಡಿವೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

# ಸೋಂಕು ಮತ್ತಷ್ಟು ಉಲ್ಬಣ:
ಇನ್ನೆರಡು ಮೂರು ತಿಂಗಳುಗಳಲ್ಲಿ ದೇಶದಲ್ಲಿ ಕೊರೊನಾ ಹಾವಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಪಾಸಿಟಿವ್ ಪ್ರಕರಣಗಳು ಅಧಿಕವಾಗಿರುವ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ಸಮುದಾಯ ಸೋಂಕಿನ ಭೀತಿ ದಟ್ಟವಾಗಿದೆ.

ದೆಹಲಿಯಲ್ಲಿ ಜೂನ್ ಅಂತ್ಯದ ವೇಳೆಗೆ 2.5 ಲಕ್ಷ ಮತ್ತು ಜುಲೈನಲ್ಲಿ 5.5 ಲಕ್ಷ ಕೊರೊನಾ ಕೇಸ್‍ಗಳು ಪತ್ತೆಯಾಗುವ ಆತಂಕವಿದೆ ಎಂಬ ಸಂಗತಿಯಲ್ಲಿ ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.