ಲತಾ ಮಂಗೇಶ್ಕರ್ ಸೇರಿದಂತೆ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‍ನಲ್ಲಿ ಸಂತಾಪ

Social Share

ಬೆಂಗಳೂರು, ಫೆ.14- ಭಾರತ ರತ್ನ ಲತಾ ಮಂಗೇಶ್ಕರ್ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‍ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವರ್ಷ ಮೊದಲ ಕಲಾಪವಾದ ಇಂದು ವಂದೇ ಮಾತರಂ ಗಾಯನದ ಮೂಲಕ ಅಧಿವೇಶನಕ್ಕೆ ಚಾಲನೆ ನೀಡಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರ ಸೂಚನೆಯ ಮೇರೆಗೆ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರು ವಿಧಾನಮಂಡಲದ ಜಂಟಿ ಅವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣವನ್ನು ಮಂಡಿಸಿದರು.
ನಂತರ ವಿವಿಧ ನೇಮಕಾತಿಗಳನ್ನು ಸಭಾಪತಿ ಸದನದ ಗಮನಕ್ಕೆ ತಂದರು. ಬಳಿಕ ಸಂತಪ ಸೂಚನಾ ನಿರ್ಣಯವನ್ನು ಕೈಗೆತ್ತಿಕೊಂಡ ಸಭಾಪತಿಯವರು, ಮಾಜಿ ಸಚಿವ ಡಾ.ಜೆ.ಅಲೆಕ್ಸಾಂಡರ್, ರಾಜ್ಯಸಭಾ ಸದಸ್ಯ ಕೆ.ಆರ್.ಜಯದೇವಪ್ಪ, ಮಾಜಿ ಸಂಸದ ಹನುಮಂತಗೌಡ ಭೀಮನಗೌಡ ಪಾಟೀಲ್, ಸಾಹಿತಿ ಚಂದ್ರ ಶೇಖರ್ ಪಾಟೀಲ್, ಧಾರ್ಮಿಕ ಸೌಹಾರ್ದತೆಯ ಸಂತ ಇಬ್ರಾಹಿಂ ಸುತಾರ, ಹಿರಿಯ ಜಾನಪದ ಕಲಾವಿದರಾದ ಬಸವಲಿಂಗಯ್ಯ ಹಿರೇಮಠ ಮತ್ತು ಪರಿಸರ ಸಂರಕ್ಷಕ ಮಹದೇವ ಬುದೋ ವೇಳಿಪ ಅವರ ನಿಧನವನ್ನು ಸದನಕ್ಕೆ ತಿಳಿಸಿ, ಅಗಲಿದ ಗಣ್ಯರ ಕಿರು ಪರಿಚಯ ಮಾಡಿಕೊಟ್ಟರು.
ಸಂತಾಪಸೂಚನ ನಿರ್ಣಯವನ್ನು ಬೆಂಬಲಿಸಿದ ಸಭಾಪತಿ ಕೋಟಾ ಶ್ರೀನಿವಾಸ ಪೂಜಾರಿ, ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿಕೊಂಡರು. ಲತಾ ಮಂಗೇಷ್ಕರ್ ಅವರು ಕಿರಿಯ ವಯಸ್ಸಿನಲ್ಲೇ ಸ್ವರ ಅಭ್ಯಾಸ ಆರಂಭಿಸಿ ಕಿರಿಯ ವಯಸ್ಸಿನಲ್ಲೇ ಸಾಧನೆ ಮಾಡಿದರು. ಅವರ ಗಾಯನ ಕೇಳಿ ಆಗಿನ ಪ್ರಧಾನ ಮಂತ್ರಿ ನೆಹರು ಅವರೇ ಕಣ್ಣೀರು ಹಾಕಿದ್ದರು. ಅಷ್ಟು ಭಾವ ಪರವಶವಾಗಿ ಲತಾ ಮಂಗೇಶ್ಕರ್ ಹಾಡುತ್ತಿದ್ದರು. ಅವರ ಹಾಡುಗಾರಿಕೆ ಸದಾ ಸ್ಮರಣೀಯ ಎಂದರು.
ಮಾಜಿ ಸಚಿವ ಅಲೆಕ್ಸಾಂಡರ್ ಕೇರಳದಲ್ಲಿ ಹುಟ್ಟಿ, ಐಎಎಸ್ ಸೇವೆಗೆ ಸೇರಿ ರಾಜ್ಯದಲ್ಲಿ ಸೇವೆಗೆ ಸೇರಿದ್ದರು, ನಂತರ ಇಲ್ಲಿಯೇ ಚುನಾವಣೆಗೆ ಸ್ರ್ಪಸಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಎಸ್.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದರು ಎಂದ ಸಭಾನಾಯಕರು, ಇಬ್ರಾಹಿಂ ಸುತಾರ ಅವರ ಬಗ್ಗೆ ಪ್ರಸ್ತಾಪಿಸಿದರು. ಪ್ರಸಕ್ತ ಕಾಲದಲ್ಲಿ ಸಮಾಜಕ್ಕೆ ಬುದ್ದಿ ಹೇಳುವವರ ಅಗತ್ಯ ಇದೆ.
ಇಬ್ರಾಹಿಂ ಕುರಾನ್ ನಷ್ಟೆ ಜ್ಞಾನವನ್ನು ಭಗವದ್ಗೀತೆಯ ಬಗ್ಗೆಯೂ ತಿಳಿದುಕೊಂಡಿದ್ದರು. ಜ್ಞಾನ ಸಂಪತ್ತು ಅಪಾರವಾಗಿತ್ತು. ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದರು. ಸಾಹಿತ ಚಂಪಾ ಅವರು ವಿಭಿನ್ನ ಪ್ರತಿಕ್ರಿಯೆಗಳ ಮೂಲಕವೇ ಜನಮನ ಸೆಳೆದಿದ್ದರು ಎಂದು ಹೇಳುವ ಮೂಲಕ ಸಭಾನಾಯಕರು ಇತರ ಗಣ್ಯರ ಗುಣಗಾನ ಮಾಡಿದರು.
ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾರ್ ಅವರು ಸಂತಾಪ ಸೂಚನೆಯನ್ನು ಬೆಂಬಲಿಸಿ ಮಾತನಾಡಿ, ಅಲೆಕ್ಸಾಂಡರ್ ಜನಪರ ಅಕಾರಿಯಾಗಿ ಕೆಲಸ ಮಾಡಿದ್ದರು. ಮುಖ್ಯಕಾರ್ಯದರ್ಶಿಯಾಗಿದ್ದಾಗ ಒಮ್ಮೆ ಆಟೋ ಚಾಲಕ ಪೊಲೀಸರು ಕಿರಿಕುಳ ನೀಡುತ್ತಿದ್ದಾರೆ ಎಂದು ದೂರಿದ್ದರು. ರಸ್ತೆ ನಡುವೆಯೇ ಕಾರಿನಿಂದ ಇಳಿದ ಅಲೆಕ್ಸಾಂಡರ್ ಸ್ಥಳದಲ್ಲೆ ಹಿರಿಯ ಅಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆ ಹರಿಸಿಕೊಟ್ಟರು. ರಾಜ್ಯದ ಸಂಪನ್ಮೂಲ ಸಂಗ್ರಹ ಹೆಚ್ಚಾಗಲು ಕಾರಣಕರ್ತರಾಗಿದ್ದಾರೆ ಎಂದರು.
ಭಕ್ತಿ ಗೀತೆಗಳನ್ನು ಲತಾ ಮಂಗೇಶ್ಕರ್ ಧ್ವನಿಯಲ್ಲಿ ಕೇಳುವುದೇ ವಿಶಿಷ್ಠ ಅನುಭವ. ಲತಾ ಅವರು ಸೌಹಾರ್ದತೆಯ ಹಲವು ಹಾಡುಗಳನ್ನು ಹಾಡಿದ್ದಾರೆ ಎಂದು ಹೇಳಿದರು. ರಾಹುಲ್ ಬಜಾಜ್ ಅವರ ನಿಧನವನ್ನೂ ಸಂತಾಪದಲ್ಲಿ ಸೇರಿಸಬೇಕಿತ್ತು ಎಂದು ಸದಸ್ಯರು ಸಭಾಪತಿ ಅವರ ಗಮನ ಸೆಳೆದರು. ಮುಂದೆ ಪರಿಶೀಲಿಸುವುದಾಗಿ ಸಭಾಪತಿ ಭರವಸೆ ನೀಡಿದರು. ನಂತರ ಸದನ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತ್ತು. ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

Articles You Might Like

Share This Article