ಸಾಹಸ ಕಲಾವಿದನ ಸಾವು : ಲವ್‍ಯು ರಚ್ಚು ಸಿನಿಮಾದ ಮೂವರಿಗೆ ನ್ಯಾಯಾಂಗ ಬಂಧನ

ಬೆಂಗಳೂರು, ಆ.10- ಲವ್ ಯು ರಚ್ಚು ಚಿತ್ರದ ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣಕ್ಕೆ ಸಂಬಂಸಿದಂತೆ ಮೂವರಿಗೆ ರಾಮನಗರ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಲವ್‍ಯು ರಚ್ಚು ಎಂಬ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಸುತ್ತಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಸಾಹಸ ಕಲಾವಿದ ವಿವೇಕ್ (35) ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಸಿದಂತೆ ನಿರ್ದೇಶಕ ಶಂಕರಯ್ಯ , ಸಾಹಸ ನಿರ್ದೇಶಕ ವಿನೋದ್ ಕುಮಾರ್, ಕ್ರೇನ್ ಚಾಲಕ ಮಹದೇವ್ ಎಂಬುವರನ್ನು ಬಂಧಿಸಿದ್ದ ಬಿಡದಿ ಪೊಲೀಸರು ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ವಿಚಾರಣೆ ನಡೆಸಿದ ರಾಮನಗರ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾದ ಅನುಪಮ ಲಕ್ಷ್ಮಿ ಅವರು ಆರೋಪಿಗಳನ್ನು ಆ.24ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿದ್ದಾರೆ.ರಾಮನಗರ ತಾಲ್ಲೂಕಿನ ಜೋಗು ಪಾಳ್ಯ, ಅಂಚೀಪುರ ಗ್ರಾಮಗಳ ಜಮೀನಿನಲ್ಲಿ ಕಳೆದ ಐದು ದಿನಗಳಿಂದ ನಟ ಅಜಯ್‍ರಾವ್, ನಟಿ ರಚಿತಾರಾಮ್ ಅಭಿನಯದ ಲವ್ ಯು ರಚ್ಚು ಸಿನಿಮಾದ ಹೊರಾಂಗಣ ಚಿತ್ರೀಕರಣ ನಡೆಯುತ್ತಿತ್ತು.

ನಿನ್ನೆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಸಾಹಸ ಕಲಾವಿದ ವಿವೇಕ್ ಮೃತಪಟ್ಟಿದ್ದು , ಮತ್ತೊಬ್ಬ ಕಲಾವಿದ ರಂಜಿತ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಅವರು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Sri Raghav

Admin