Sunday, September 15, 2024
Homeರಾಜ್ಯಮಾಜಿ ಸಿಎಂ ಒಬ್ಬರ ಲೈಂಗಿಕ ಹಗರಣ : ಸುಪ್ರೀಂ ಮೆಟ್ಟಿಲೇರಲು ಮುಂದಾದ ವಕೀಲ ಜಗದೀಶ್

ಮಾಜಿ ಸಿಎಂ ಒಬ್ಬರ ಲೈಂಗಿಕ ಹಗರಣ : ಸುಪ್ರೀಂ ಮೆಟ್ಟಿಲೇರಲು ಮುಂದಾದ ವಕೀಲ ಜಗದೀಶ್

Lawyer Jagdish move to Supreme Court on the sex scandal of a former CM

ಬೆಂಗಳೂರು,ಆ.25- ಮಾಜಿ ಸಚಿವ ರಮೇಶ್ ಜಾರಕಿಹೊಳಿಅವರ ಸಿ.ಡಿ ಪ್ರಕರಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ವಕೀಲ ಜಗದೀಶ್, ಇದೀಗ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಲೈಂಗಿಕ ಹಗರಣದ ವಿಚಾರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ನಂದಿಬೆಟ್ಟಕ್ಕೆ ಹೋಗಿ ಕೆಲವು ಅಧಿಕಾರಿಗಳು, ಅಂದಿನ ಸಚಿವರು ಹಾಗೂ ಮಧ್ಯವರ್ತಿಗಳ ಸಹಾಯದಿಂದ ಹೆಣ್ಣುಮಕ್ಕಳ ಸಂಘದಲ್ಲಿ ಮೈಮರೆತು ನಿಯಮ ಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡಿದ್ದಾರೆ ಎಂದು ಆರೋಪ ಮಾಡಿರುವ ವಕೀಲರು, ಈ ಹಗರಣವನ್ನು ಸುಪ್ರೀಂಕೋರ್ಟ್ ನಿಗಾವಣೆಯಲ್ಲಿ ತನಿಖೆಯಾಗಬೇಕೆಂದು ಮನವಿ ಮಾಡುವುದಾಗಿ ಹೇಳಿದ್ದಾರೆ.

ಹಲವು ದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿರುವ ವಕೀಲ ಜಗದೀಶ್ ಇದ್ದಕ್ಕಿದ್ದಂತೆ ಮಾಜಿ ಮುಖ್ಯಮಂತ್ರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅದರ ಮುಂದುವರೆದ ಭಾಗವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಮಾಹಿತಿ ನೀಡಿದ್ದಾರೆ.

ಹೆಣ್ಣುಮಕ್ಕಳನ್ನು ಬಳಸಿಕೊಂಡು ಮಾಜಿ ಮುಖ್ಯಮಂತ್ರಿಯಿಂದ ಆಗಿನ ಸಚಿವರು, ಅಧಿಕಾರಿಗಳು ಕೋಟ್ಯಂತರ ರೂ. ಲಾಭ ಮಾಡಿಕೊಂಡಿದ್ದಾರೆ. ಅಕ್ರಮ ಮಾಡಿದವರು, ಅಕ್ರಮವಾಗಿ ಹಣ ಸಂಪಾದನೆ ಮಾಡಿದವರು ಪ್ರಕರಣಗಳಿಂದ ರಕ್ಷಣೆ ಪಡೆದಿದ್ದಾರೆ. ಮುಖ್ಯಮಂತ್ರಿ ಜೊತೆಗೆ ಆಗಿನ ಇನ್ನಿಬ್ಬರು ಸಚಿವರು ಈ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದು, ಅವರಲ್ಲಿ ಒಬ್ಬರು ಈಗ ಸಂಸದರಾಗಿದ್ದಾರೆ ಎಂದು ಸುಳಿವು ನೀಡಿದ್ದಾರೆ.

ಈ ಹಗರಣದ ಕುರಿತು ನಾವು ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಅದರ ಪ್ರಕಾರ ಮೇಲ್ನೋಟಕ್ಕೆ ಆರೋಪಗಳು ಸಾಬೀತಾಗುವಂತಿವೆ. ಮಾಜಿ ಮುಖ್ಯಮಂತ್ರಿಯನ್ನು ಲೈಂಗಿಕ ಹಗರಣದಲ್ಲಿ ತೊಡಗಿಸಿ ಇಬ್ಬರು ಸಚಿವರು ಹಾಗೂ 15ರಿಂದ 20 ಅಧಿಕಾರಿಗಳು ಹಲವು ರೀತಿಯ ಲಾಭಗಳನ್ನು ಪಡೆದುಕೊಂಡಿದ್ದಾರೆ ಎಂದು ಜಗದೀಶ್ ದೂರಿದ್ದಾರೆ.

ಈ ಹಗರಣದಲ್ಲಿ ಆಂಧ್ರಪ್ರದೇಶದಿಂದ ನಟಿಯರನ್ನು ಹಾಗೂ ಹೆಣ್ಣುಮಕ್ಕಳನ್ನು ಕರೆಸಿಕೊಳ್ಳಲಾಗಿದೆ. ಒಬ್ಬರಿಗಿಂತಲೂ ಹೆಚ್ಚು ಜನರನ್ನು ಏಕಕಾಲಕ್ಕೆ ಬಳಕೆ ಮಾಡಲಾಗಿದೆ. ಅದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಲ್ಲಿ ಹೆಣ್ಣು ಮಕ್ಕಳಿಂದ ದೂರು ಕೊಡಿಸುವುದಾಗಲಿ ಅಥವಾ ಹಾಸನದ ಮಾದರಿಯಲ್ಲಿ ಸಿ.ಡಿ ಬಿಡುಗಡೆ ಮಾಡಿಸುವುದಾಗಲಿ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಹುತೇಕವಾಗಿ ಹೆಣ್ಣು ಮಕ್ಕಳು ಸಹಮತಿಯ ಮೇರೆಗೆ ಇತರ ಲಾಲಸೆಗಳಿಗೆ ಒಳಗಾಗಿಯೇ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ ದೂರು ಕೊಡಿಸುವುದು ಅರ್ಥಹೀನವಾಗುತ್ತದೆ. ಅಧಿಕಾರದಲ್ಲಿದ್ದಾಗ ಈ ರೀತಿಯ ಜಾಲಕ್ಕೆ ಸಿಲುಕಿ ಯಾವೆಲ್ಲ ಕಡತಗಳಿಗೆ ಸಹಿ ಮಾಡಿದ್ದಾರೆ. ಆಡಳಿತಾತಕವಾಗಿ ಹಾಗೂ ಬೊಕ್ಕಸಕ್ಕೆ ಆಗಿರುವ ನಷ್ಟವೇನು ಎಂಬುದರ ಬಗ್ಗೆ ಮಾತ್ರ ನಾವು ಗಮನಹರಿಸುತ್ತಿದ್ದೇವೆ. ಈ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ದೆಹಲಿಯಲ್ಲಿ ವಕೀಲರ ತಂಡ ಕಡತಗಳನ್ನು ಸಜ್ಜುಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ಆಗಿನ ಮುಖ್ಯಮಂತ್ರಿಯನ್ನು ನಂದಿಬೆಟ್ಟ ಹಾಗೂ ಇತರ ಜಾಗಗಳಿಗೆ ಕರೆದುಕೊಂಡು ಹೋಗಿದ್ದವರೇ ವಿಡಿಯೋಗಳನ್ನು ಚಿತ್ರಿಸಿಕೊಂಡು ಬ್ಲಾಕ್ಮೇಲ್ ಮಾಡಿದ್ದರು ಎಂಬ ಮಾಹಿತಿ ಇದೆ. ಇದರಲ್ಲಿ ಆರೋಪಿಗಳು ಹಾಗೂ ಮಧ್ಯವರ್ತಿಗಳು ಪ್ರಮುಖ ಸ್ಥಾನದಲ್ಲಿರುವುದರಿಂದಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಾಹಿತಿ ನೀಡುತ್ತೇವೆ.

ಬಳಿಕ ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆಯಾಗಬೇಕು. ವಿಡಿಯೋದಲ್ಲಿರುವ ವ್ಯಕ್ತಿಯ ಬಗ್ಗೆ ಕರಾರುವಕ್ಕಾದ ಮಾಹಿತಿ
ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸುವುದಾಗಿ ಜಗದೀಶ್ ತಿಳಿಸಿದ್ದಾರೆ.

RELATED ARTICLES

Latest News