“ಇಲಾಖೆ ಸಂಕಷ್ಟದಲ್ಲಿದ್ದರೂ ಸಾರಿಗೆ ನೌಕರರಿಗೆ ವೇತನ ಕೊಟ್ಟಿದ್ದೇವೆ, ಪ್ರತಿಭಟನೆ ಸರಿಯಲ್ಲ”

ಬೆಂಗಳೂರು,ಡಿ.11- ಸಾರಿಗೆ ನೌಕರರ ಹಿತ ಕಾಪಾಡಲು ಸರ್ಕಾರ ಬದ್ದವಾಗಿದೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ನಡೆಸುವುದು ಸರಿಯಲ್ಲ. ಕೂಡಲೇ ನಿಮ್ಮ ಧರಣಿಯನ್ನು ಹಿಂಪಡೆದುಕೊಳ್ಳಿ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ಸಂಕಷ್ಟದಲ್ಲಿದ್ದರೂ ನೌಕರರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಸಂಪೂರ್ಣವಾಗಿ ವೇತನ ಕೊಟ್ಟಿದ್ದೇವೆ.

ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಕೋರಿದರು.  ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರ ಬೇಡಿಕೆಗಳ ಬಗ್ಗೆ ಪರಿಶೀಲನೆ ಮಾಡಲಾಗುವುದು. ನಂತರ ನೌಕರರ ಜೊತೆಯೂ ಸಭೆ ನಡೆಸುತ್ತೇನೆ ಎಂದರು ಸವದಿ ತಿಳಿಸಿದರು.  ನಾಲ್ಕು ನಿಗಮಗಳು ನಷ್ಟದಲ್ಲಿದ್ದೂ ನೌಕರರ ವೇತನವನ್ನು ಬಿಡುಗಡೆ ಮಾಡಲಾಗಿದೆ. ಬೇಡಿಕೆಗಳನ್ನು ಒಂದೇ ಹಂತದಲ್ಲಿ ಈಡೇರಿಸಿ ಎಂದು ಪ್ರತಿಭಟನೆ ನಡೆಸುವುದು ಸರಿಯಲ್ಲ. ಸಾರಿಗೆ ಇಲಾಖೆಯ ನೌಕರರ ಹಿತ ಕಾಪಾಡಲು ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ನಮ್ಮ ಇಲಾಖೆಯ ಹಿತ ಕಾಪಾಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ನೌಕರರು ಧರಣಿ ವಾಪಸ್ ಪಡೆಯೇಕು. ಸರ್ಕಾರ ನಿಮ್ಮ ಜೊತೆಗಿದೆ ಎಂದರು.  ಏಕಕಾಲದಲ್ಲಿ ಎಲ್ಲವನ್ನೂ ಈಡೇರಿಸಲು ಸಾಧ್ಯವಿಲ್ಲ. ಕೋವಿಡ್ ಸಂದರ್ಭದಲ್ಲಿ ಎರಡು ತಿಂಗಳು ಬಂದ್ ಆಗಿತ್ತು. ಈ ವೇಳೆ ನೌಕರರ ಬಾಕಿಯಿದ್ದ ವೇತನವನ್ನು ಕೊಟ್ಟಿದ್ದೇವೆ. ಬೇರೆ ರಾಜ್ಯಗಳಲ್ಲಿ ಈವರೆಗೂ ನೌಕರರಿಗೆ ಸಂಬಳವನ್ನೇ ಕೊಟ್ಟಿಲ್ಲ. ಇದು ನಮ್ಮ ಸಿಬ್ಬಂದಿಗೆ ಅರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಸಾರ್ವಜನಿಕರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆದರೂ ಬದಲಿ ವ್ಯವಸ್ಥೆ ಮಾಡಿದ್ದೇವೆ. ಇದಕ್ಕೆ ಎಲ್ಲರೂ ಸಹಕಾರ ಕೊಡಿ ಎಂದು ಮನವಿ ಮಾಡಿಕೊಂಡರು. ನಿನ್ನೆ ವಿಧಾನಪರಿಷತ್‍ನಲ್ಲಿ ಕೆಲವು ಮಹತ್ವದ ವಿಧೇಯಕಗಳು ಅಂಗೀಕಾರವಾಗಬೇಕಾದ ಕಾರಣ ನಾನು ಸದನದಲ್ಲೇ ಇದ್ದೆ. ಹೀಗಾಗಿ ಪ್ರತಿಭಟನಾನಿರತರ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ.

ಎಲ್ಲ ಸದಸ್ಯರು ಸದನದಲ್ಲೇ ಇದ್ದು ಮಸೂದಗಳಿಗೆ ಅಂಗೀಕಾರ ಪಡೆಯಬೇಕಿತ್ತು. ಇದು ಅನಿವಾರ್ಯತೆ ಕೂಡ. ನಮಗೆ ಬಹುಮತವಿಲ್ಲದೆ ಕಾರಣ ಕಲಾಪದಲ್ಲಿ ಪಾಲ್ಗೊಂಡಿದ್ದೆವು. ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆ ಮಾಡುವ ವೇಳೆ ಕೆಲವರು ಮುತ್ತಿಗೆ ಹಾಕುವ ಕೆಲಸ ಮಾಡಿದ್ದಾರೆ. ಅದನ್ನು ನಿಯಂತ್ರಿಸುವುದು ಮತ್ತು ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಲು ಪೊಲೀಸರು ಕೆಲವರನ್ನು ಬಂಧಿಸಿದ್ದರು. ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.