ಬೆಂಗಳೂರು,ಮಾ.8- ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಕಾಂಗ್ರೆಸ್‍ನಲ್ಲಿದ್ದವರು ಬಿಜೆಪಿ ಕಡೆ, ಬಿಜೆಪಿಯಲ್ಲಿದ್ದವರು ಕಾಂಗ್ರೆಸ್‍ನತ್ತ, ಎರಡೂ ಪಕ್ಷದಲ್ಲಿ ಸಲ್ಲದವರು ಜೆಡಿಎಸ್ ಕಡೆ, ದಳದಲ್ಲಿ ಟಿಕೆಟ್ ಖಾತ್ರಿ ಇಲ್ಲದವರು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ.
ಮಂಗಳವಾರ ಮಾಜಿ ಶಾಸಕರಾದ ನಂಜುಂಡಸ್ವಾಮಿ, ಜೆ.ನರಸಿಂಹಸ್ವಾಮಿ, ಮನೋಹರ್ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಇನ್ನೊಂದೆಡೆ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿ ನಾರಾಯಣ, ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಸೀಕಲ್ ರಾಮಚಂದ್ರಗೌಡ, ಉದ್ಯಮಿ ಎಸ್.ವಿ.ಆನಂದ ಗೌಡ, ಸಿನಿಮಾ ನಿರ್ಮಾಪಕ ವಿಜಯ್‍ಕುಮಾರ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಬೆಳವಣಿಗೆಗಳ ನಡುವೆಯೇ ಜೆಡಿಎಸ್‍ನ ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್, ಎ.ಟಿ.ರಾಮಸ್ವಾಮಿ ಕೂಡ ದಳಪತಿಗಳಿಗೆ ಕೈಕೊಟ್ಟು ಕಾಂಗ್ರೆಸ್‍ಗೆ ಸೇರುತ್ತಿದ್ದಾರೆ. ಇದರಲ್ಲಿ ಶಿವಲಿಂಗೇಗೌಡ ಮತ್ತು ಗುಬ್ಬಿ ಶ್ರೀನಿವಾಸ್‍ಗೆ ಟಿಕೆಟ್ ಖಾತರಿಯಾಗಿದ್ದರೆ ಎ.ಟಿ.ರಾಮಸ್ವಾಮಿಗೆ ಟಿಕೆಟ್ ಇನ್ನು ಗೊಂದಲದಲ್ಲಿದೆ.
ದೇಶದಲ್ಲಿ ಒಳ್ಳೆಯವರಿಗೆ ಉಳಿಗಾಲವಿಲ್ಲ: ಕೇಜ್ರಿವಾಲ್
ಅರಕಲಗೂಡಿನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಕೆಂಪೇಗೌಡ ಅವರಿಗೆ ಟಿಕೆಟ್ ನೀಡಲು ಒಲವು ತೋರಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಎ.ಟಿ.ರಾಮಸ್ವಾಮಿಗೆ ಟಿಕೆಟ್ ಕೊಡಿಸುವ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಈ ಕ್ಷೇತ್ರ ಇನ್ನು ಗೊಂದಲದಲ್ಲೇ ಉಳಿದಿದೆ.
ರೇಷ್ಮೆ ಮತ್ತು ಯುವ ಸಬಲೀಕರಣ ಸಚಿವ ಕೆ.ಸಿ.ನಾರಾಯಣಗೌಡ ಬಿಜೆಪಿಗೆ ಟಾಟಾ ಹೇಳಿ ಕೈ ಹಿಡಿಯುವ ಲೆಕ್ಕಾಚಾರದಲ್ಲಿದ್ದಾರೆ. ಅವರ ಸೇರ್ಪಡೆಗೆ ತವರು ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿರುವುದರಿಂದ ಯಾವುದು ದಾರಿ? ಎಲ್ಲಿಗೆ ಪಯಣ ಎಂಬಂತಾಗಿದೆ.
ಬಿಜೆಪಿಯಲ್ಲೇ ಇರ್ತಾರ ಬಾಂಬೆ ಬಾಯ್ಸ್:
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದ ಹಾಲಿ ಕೆಲವು ಸಚಿವರು ಮರಳಿ ತವರು ಮನೆಯತ್ತ ಮುಖ ಮಾಡಿದ್ದಾರೆ ಎಂಬು ಮಾತುಗಳು ಕೇಳಿಬರುತ್ತಲೇ ಇವೆ.
ಸಚಿವರಾದ ಎಸ್.ಟಿ.ಸೋಮಶೇಖರ್,ಕೆ.ಗೋಪಾಲಯ್ಯ, ಭೈರತಿ ಬಸವರಾಜ್, ಮುನಿರತ್ನ, ಬಿ.ಸಿ.ಪಾಟೀಲ್ ಸೇರಿದಂತೆ ಅನೇಕರು ಬಿಜೆಪಿಯಲ್ಲಿ ಮುಂದುವರೆಯಬೇಕೆ ಇಲ್ಲವೇ ಹಳೆ ಗಂಡನ ಪಾದವೇ ಗತಿ ಎಂಬಂತೆ ಮಾತೃ ಪಕ್ಷಕ್ಕೆ ಮರಳಬೇಕೆ ಎಂಬ ಜಿಜ್ಞಾಸೆಯಲ್ಲಿದ್ದಾರೆ.
ಇದರಲ್ಲಿ ಕೆಲವರು ಕಾಂಗ್ರೆಸ್‍ಗೆ ಬರಲು ಸಿದ್ದರಾಗಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷ ಸೇರ್ಪಡೆಗೆ ಒಪ್ಪುತ್ತಿಲ್ಲ. ಹೀಗಾಗಿಯೇ ಪಕ್ಷ ಸೇರ್ಪಡೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯಲ್ಲಿನ ಬೆಳವಣಿಗೆ ಅವರು ಕಾದು ನೋಡುವ ತಂತ್ರ ಅನುಸರಿಸುವಂತೆ ಮಾಡಿದೆ. ಸದ್ಯಕ್ಕೆ ಮಂಕಾಗಿರುವ ಬಿಜೆಪಿಗೆ ಚುರುಕು ಮುಟ್ಟಿಸಲೆಂದೇ ಚುನಾವಣಾ ಚಾಣಕ್ಯ ಅಮಿತ್ ಶಾ ಬಂದು ಹೋಗಿದ್ದಾರೆ. ಮುಂದಿನ ಬೆಳವಣಿಗೆಗಳು ಹೇಗಿವೆಯೋ ಗೊತ್ತಿಲ್ಲ. ಈ ಹಿಂದೆಯಿದ್ದ ಸಮ್ಮಿಶ್ರ ಸರ್ಕಾರದಿಂದ ಸಿಡಿದೆದ್ದು ಬಂದ ಶಾಸಕರು ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯಲ್ಲಿಯೇ ಇರುತ್ತಾರಾ? ಅಥವಾ ಪಕ್ಷ ನಿಷ್ಠೆ ಬದಲಾಯಿಸುತ್ತಾರೋ ಗೊತ್ತಿಲ್ಲ. ಆದರೆ ಅವರ ಕಾರ್ಯವನ್ನು ಹೈಕಮಾಂಡ್ ಹೊಗಳಿರುವುದು ಸಮಾಧಾನ ತಂದಿದೆ.
ಹಾಗೆ ನೋಡಿದರೆ ಕಾಂಗ್ರೆಸ್ ನಿಂದ ಬಂದ ಶಾಸಕರು ಬಿಜೆಪಿ ಸೇರ್ಪಡೆಗೊಂಡ ಬಳಿಕ ಯಾವುದೇ ಕ್ಯಾತೆ ತೆಗೆಯದೆ ಕೆಲಸ ಮಾಡುತ್ತಿದ್ದಾರೆ. ಆದರೆ ಮೂಲ ಬಿಜೆಪಿಗರ ಪೈಕಿ ಕೆಲವು ಶಾಸಕರಿಗೆ ಸಚಿವ ಸ್ಥಾನ ಸಿಗದ ಅಸಮಾಧಾನವಿದ್ದರೂ ಕೂಡ ಮೇಲ್ನೋಟಕ್ಕೆ ತಣ್ಣಗೆ ಆದಂತೆ ಕಾಣುತ್ತಿದೆ.
ಭಾರತದಲ್ಲಿ ಹೋಳಿ ಹಬ್ಬ ಆಚರಿಸಿದ ಅಮೆರಿಕದ ಉನ್ನತಾಧಿಕಾರಿ
ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡ ಶಾಸಕರು ಬಿಜೆಪಿಯತ್ತ ಒಲವು ತೋರಿದ್ದರಾದರೂ ಈಗಿನ ಬೆಳವಣಿಗೆಯಲ್ಲಿ ಅವರು ಯಾವುದೇ ನಿರ್ಧಾರಕ್ಕೆ ಬಂದಂತೆ ಕಾಣುತ್ತಿಲ್ಲ. ಅವರದ್ದೇನಿದ್ದರೂ ಈಗ ಕಾದು ನೋಡುವ ತಂತ್ರವಾಗಿದೆ.
ಎ.ಮಂಜು ಜೆಡಿಎಸ್‍ಗೆ:
ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಸಚಿವ ಎ.ಮಂಜು ಜೆಡಿಎಸ್‍ಗೆ ಸೇರುವುದು ಖಚಿತವಾಗಿದೆ. ಈಗಾಗಲೇ ಪಕ್ಷದ ವರಿಷ್ಠರ ಜೊತೆ ಚರ್ಚೆ ನಡೆಸಿರುವ ಅವರು ಮುಂದಿನ ಚುನಾವಣೆಗೆ ಅರಕಲಗೂಡಿನಿಂದ ಸ್ಪರ್ಧೆ ಮಾಡಲಿದ್ದಾರೆ.
ಹಾಲಿ ಶಾಸಕ ಎ.ಟಿ.ರಾಮಸ್ವಾಮಿ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಇಲ್ಲವೇ ಬಿಜೆಪಿಯತ್ತ ಮುಖ ಮಾಡಿರುವುದರಿಂದ ಮಂಜು ಸೇರ್ಪಡೆಗೆ ಹಾದಿ ಸುಗಮವಾಗಿದೆ. ಈ ತಿಂಗಳ 2ನೇ ವಾರದಲ್ಲಿ ತಮ್ಮ ಬೆಂಬಲಿಗರ ಜೊತೆ ಜೆಡಿಎಸ್ ತೆಕ್ಕೆಗೆ ಮರಳಲಿದ್ದಾರೆ. ಬಿಜೆಪಿಗೆ ಬರಲು ಕೆಲವರು ತುದಿಗಾಲಲ್ಲಿ ನಿಂತಿದ್ದರೂ ಪರಿಸ್ಥಿತಿ ಮತ್ತು ಸಂದರ್ಭ ನೋಡಿಕೊಂಡು ತೀರ್ಮಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಗೊಂದಲದಲ್ಲಿ ಸುಮಲತಾ: ಹಾಲಿ ಮತ್ತು ಮಾಜಿ ಶಾಸಕರ ಗತಿ ಈ ರೀತಿಯಾದರೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷಾಂತರ ಸದಸ್ಯೆ ಸುಮಲತ ಅಂಬರೀಶ್ ಅವರದ್ದು ಇನ್ನೊಂದು ಕಥೆ. ಕಾಂಗ್ರೆಸ್ ಸೇರಬೇಕೆ ಇಲ್ಲವೇ ಬಿಜೆಪಿಗೆ ಹೋಗಬೇಕೆಂಬ ಗೊಂದಲದಲ್ಲಿರುವ ಅವರು ಸದ್ಯಕ್ಕೆ ಬೆಂಬಲಿಗರು, ಹಿತೈಷಿಗಳು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಮುಂದಡಿ ಇಡುತ್ತಿದ್ದಾರೆ.
ಟಿಎಮ್‍ಸಿ ನಾಯಕ ಮೊಂಡಾಲ್ ಇಡಿ ಕಸ್ಟಡಿಗೆ
ಈಗಾಗಲೇ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿರುವ ಸುಮಲತಾ ಅಂಬರೀಶ್ ಜಿಲ್ಲೆಯ ವಿವಿಧ ನಾಯಕರನ್ನು ಭೇಟಿಯಾಗಿ ಪಕ್ಷ ಸೇರ್ಪಡೆಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಇದೇ ತಿಂಗಳ 12ರಂದು ಪ್ರಧಾನಿ ನರೇಂದ್ರಮೋದಿ ಅವರು ಮಂಡ್ಯ ಜಿಲ್ಲೆ ಮದ್ದೂರಿಗೆ ಆಗಮಿಸುತ್ತಿದ್ದು, ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೇಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಷ್ಟರೊಳಗೆ ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ.
ಆದರೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಅಳೆದು ತೂಗಿ ಆಲೋಚಿಸಿ ಒಂದು ಹೆಜ್ಜೆ ಮುಂದೆ ಹೋಗುವ ಸುಮಲತಾ ಅಂಬರೀಶ್ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಹೀಗೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಂಪಿಂಗ್ ಪಾಲಿಟಿಕ್ಸ್ ಕೂಡ ಜೋರಾಗಿದೆ.
Leaders, assembly, election, political parties,