ನಾಯಕತ್ವ ಬದಲಾವಣೆ ಇಲ್ಲ, ನಾನು ಯಾರ ಕೈಗೊಂಬೆಯೂ ಅಲ್ಲ : ಸಿಎಂ ಸ್ಪಷ್ಟನೆ

Social Share

ಬೆಂಗಳೂರು,ಆ.27- ನಾಯಕತ್ವ ಬದಲಾವಣೆ ವದಂತಿಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಬಿಜೆಪಿ ವರಿಷ್ಠರು ನನಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳಿದ್ದಾರೆ. ತಮ್ಮನ್ನು ವಿಧಾನಸಭೆ ಚುನಾವಣೆಗೂ ಮುನ್ನವೇ ಬದಲಾಯಿಸಿ ಬೇರೊಬ್ಬರಿಗೆ ಸಾರಥ್ಯ ನೀಡಲಾಗುತ್ತದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ. ನನಗೆ ಕೇಂದ್ರ ಬಿಜೆಪಿ ನಾಯಕರ ಸಂಪೂರ್ಣ ಬೆಂಬಲವಿದೆ. ಆಡಳಿತ ಯಾರೊಬ್ಬರು ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ತಿಳಿಸಿದರು.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಮ್ಮ ನಾಯಕತ್ವ ಬದಲಾವಣೆಯಾಗುತ್ತದೆ
ಎಂಬ ಪುಕಾರು ಕೇಳಿಬರುತ್ತದೆಯಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಿದಿನವೂ ಭಾನುವಾರವಾಗಿರಲು ಸಾಧ್ಯವಿಲ್ಲ. ನನಗೆ ಹೈಕಮಾಂಡ್ ಸಂಪೂರ್ಣ ಮುಕ್ತ ಸ್ವಾತಂತ್ರ್ಯ ನೀಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೈಗೊಂಬೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸಹ ಅವರು ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಅವರಿಂದ ನಾನು ಸಲಹೆ ಹಾಗೂ ಮಾರ್ಗದರ್ಶನ ಪಡೆಯುತ್ತೇನೆ. ಸರ್ಕಾರದ ದೈನಂದಿನ ಆಡಳಿತದಲ್ಲಿ ಅವರು ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಇದು ಪ್ರತಿಪಕ್ಷಗಳ ಕಪೋಲಕಲ್ಪಿತ ಸುದ್ದಿ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಒಬ್ಬ ಪ್ರಭಾವಶಾಲಿ ಹಾಗೂ ಸಮೂಹ ನಾಯಕ. ಅವರ ಅಧಿಕಾರ ಅವಧಿಯಲ್ಲಿ ಜಾರಿಗೆ ಮಾಡಿದ್ದ ಜನಪರ ಕಾರ್ಯಕ್ರಮಗಳ ಅನುಷ್ಠಾನ ಅದರಿಂದ ಉತ್ತೇಜನ ಪಡೆದಿದ್ದೇನೆ. ಸರ್ಕಾರ ಮುನ್ನೆಡೆಸುವ ಸಂದರ್ಭದಲ್ಲಿ ಅವರ ಮಾರ್ಗದರ್ಶನ ಪಡೆಯುವಲ್ಲಿ ತಪ್ಪೇನಿಲ್ಲ. ನಮ್ಮ ಸರ್ಕಾರಕ್ಕೆ ಅವರ ಸಹಕಾರ ಮತ್ತು ಸಹಾಯ ಅತ್ಯಗತ್ಯ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಆದರೆ ದೈನಂದಿನ ಆಡಳಿತದಲ್ಲಿ ಅವರು ಎಂದಿಗೂ ಕೂಡ ಹಸ್ತಕ್ಷೇಪ ಮಾಡಿಲ್ಲ. ಕೆಲವರು ಅನಗತ್ಯವಾಗಿ ಇಂಥ ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ಕೆಲವು ಭಾಗಗಳಲ್ಲಿ ನಡೆದ ಕೋಮುಗಲಭೆ , ಹಿಂದೂ ಹಾಗು ಮುಸ್ಲಿಂ ಯುವಕರ ಕಗ್ಗೊಲೆ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ದಾಳಿಯ ಬಗ್ಗೆ ಮಾತನಾಡಿರುವ ಅವರು, ನಮ್ಮ ಸರ್ಕಾರ ಸಕಾಲದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಯಲ್ಲೂ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆದಿತ್ತು. ನಮ್ಮ ಅಕಾರ ಅವಯಲ್ಲಿ ಎಲ್ಲರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಿರಂತರವಾಗಿ ದಾಳಿಗಳು ನಡೆದಿದ್ದವು. ಹೀಗಾಗಿ ಆ ಸರ್ಕಾರದ ಮೇಲೆ ಒಂದು ಸಮುದಾಯ ಕೋಪ ಮತ್ತು ಅಸಮಾಧಾನಗೊಂಡಿತ್ತು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಅಂತಹ ಬೆಳವಣಿಗೆಗಳು ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೋಮುಗಲಭೆ ನಿಯಂತ್ರಿಸಲು ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೊ ಸರ್ಕಾರ ತೆಗೆದುಕೊಂಡಿದೆ. ಕಾನೂನು ಸುವ್ಯವಸ್ಥೆ ಎಲ್ಲಿಯೂ ಹದಗೆಟ್ಟಿಲ್ಲ. ಭವಿಷ್ಯದಲ್ಲಿ ಕೋಮುಗಲಭೆ, ಕೊಲೆಗಳು ನಡೆಯುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದನ್ನು ತಡೆಯಲು ನಾವು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಶೀಘ್ರದಲ್ಲೇ ನಾನು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ಕೊಟ್ಟು ಸಾವನ್ನಪ್ಪಿದ ಮುಸ್ಲಿಂ ಯುವಕನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ಹೇಳುತ್ತೇನೆ ಎಂದು ಹೇಳಿದ್ದಾರೆ.

ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಸರ್ಕಾರ ಜಾರಿಗೆ ತಂದಿರುವ ಮತಾಂತರ ವಿರೋ ಕಾನೂನನ್ನು ಸಮರ್ಥಿಸಿಕೊಂಡ ಅವರು, ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮತಾಂತರಗಳು ನಡೆಯುತ್ತಿವೆ. ನಮ್ಮ ಶಾಸಕರ ತಾಯಿಯೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ, ಎಂದು ಹೇಳಿದ್ದಾರೆ.

ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಭ್ರಷ್ಟಾಚಾರ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಭ್ರಷ್ಟಾಚಾರ ಆರೋಪ ಮಾಡುವ ಗುತ್ತಿಗೆದಾರರು ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ, ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Articles You Might Like

Share This Article