ಬೆಂಗಳೂರು,ಸೆ.16-ವಾಹನಗಳಲ್ಲಿ ಅತಿ ಪ್ರಕರವಾದ ಎಲ್‍ಇಡಿ ದ್ವೀಪಗಳನ್ನು ಅಳವಡಿಸಿಕೊಂಡಿರುವ ವಾಹನಗಳಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ವೈ.ಎಂ.ಸತೀಶ ಅವರ ಪ್ರಶ್ನೆಗೆ ಉತ್ತರಿಸಿದ ಅವರು. ಅತಿ ಪ್ರಕಾಶಮಾನವಾದ ಲೈಟ್‍ಗಳಿಂದ ಅಪಘಾತಗಳು ಸಂಭವಿಸುತ್ತಿವೆ ಎಂಬುದು ಸರ್ಕಾರದ ಗಮನಕ್ಕೆ ಬಂದಿಲ್ಲ. ಆದರೆ ವಿರುದ್ಧದ ದಿಕ್ಕಿನಲ್ಲಿ ಬರುವ ವಾಹನಗಳ ಪ್ರಕರ ಬೆಳಕಿನಿಂದ ವಾಹನ ಚಾಲಕರಿಗೆ ಕಿರಿಕಿರಿಯಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಇವುಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದರು.
ಇದನ್ನೂ ಓದಿ : ಅಪ್ಪು ಜನ್ಮದಿನವನ್ನು ‘ಸ್ಪೂರ್ತಿ ದಿನ’ವಾಗಿ ಆಚರಿಸಲು ಸರ್ಕಾರ ಘೋಷಣೆ
ವಾಹನಗಳ ತಪಾಸಣೆ ವೇಳೆ ಮತ್ತು ಪ್ರವರ್ತನ ಸಮಯದಲ್ಲಿ ಈ ರೀತಿಯ ಲೈಟ್‍ಗಳು ಕಂಡುಬಂದರೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು. 2019ರಲ್ಲಿ ಪ್ರಕರವಾದ ಎಲ್‍ಇಡಿ ಅಳವಡಿಸಿದ ಕಾರಣಕ್ಕೆ 7414 ವಾಹನಗಳಿಗೆ ದಂಡ ವಿಧಿಸಲಾಗಿತ್ತು. 2020ರಲ್ಲಿ 2312 ವಾಹನಗಳಿಗೆ, 2021ರಲಿ 1492 ವಾಹನಗಳಿಗೆ, ಪ್ರಸಕ್ತ ವರ್ಷ ಆಗಸ್ಟ್ ವೇಳೆಗೆ 703 ವಾಹನಗಳಿಗೆ ದಂಡ ವಿಧಿಸಲಾಗಿದೆ. ರಾಜ್ಯ ಸರ್ಕಾರ ರಸ್ತೆ ಸುರಕ್ಷತೆಗಾಗಿ ಹೆಚ್ಚು ಆದ್ಯತೆ ನೀಡಿದ್ದು, 295 ಕೋಟಿ ರೂ. ಮೀಸಲಿಟ್ಟಿದೆ.
ಹೆಚ್ಚು ಅಪಘಾತಗೊಳಗಾಗುವ 942 ಬ್ಲಾಕ್‍ಸ್ಪಾಟ್‍ಗಳನ್ನು ಗುರುತಿಸಿ ಅವುಗಳಲ್ಲಿ 600ನ್ನು ತೆರವು ಮಾಡಲಾಗಿದೆ. ಬಾಕಿ ಉಳಿದವುಗಳ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಣೆ ನೀಡಿದರು.
ಈ ಮೊದಲು ಹೆಡ್‍ಲೈಟ್‍ಗಳ ಮೇಲ್ಭಾಗದ ಅರ್ಧ ಭಾಗಕ್ಕೆ ಕಪ್ಪು ಪಟ್ಟಿಯನ್ನು ಬಳಯಲಾಗುತ್ತಿತ್ತು. ಆದರೆ ಅಧುನಿಕ ತಂತ್ರಜ್ಞಾನದಲ್ಲಿ ವಾಹನ ಉತ್ಪಾದನಾ ಕಂಪನಿಗಳೇ ಫೋಕಸನ್ನು ವೈಜ್ಞಾನಿಕವಾಗಿ ನಿರ್ಧರಿಸಿ ನಿರ್ಮಾಣ ಮಾಡುವುದರಿಂದ ಕಪ್ಪು ಪಟ್ಟಿ ಬಳಕೆಯನ್ನು ಕೈಬಿಡಲಾಗಿದೆ ಎಂದರು.