ಬೆಂಗಳೂರು,ಆ.6- ವಿಧಾನಪರಿಷತ್‍ನಲ್ಲಿ ಆಡಳಿತಾರೂಢ ಬಿಜೆಪಿಗೆ ಪೂರ್ಣ ಬಹುಮತ ಲಭಿಸಿರುವ ಕಾರಣ ಮುಂಬರುವ ಅಧಿವೇಶನದಲ್ಲಿ ಕರ್ನಾಟಕ ಧಾರ್ಮಿಕ ಸ್ವತಂತ್ರ ಹಕ್ಕು ಸಂರಕ್ಷಣಾ( ಮತಾಂತರ ನಿಷೇಧ) ಮಸೂದೆಯನ್ನು ಮಂಡಿಸಲು ತೀರ್ಮಾನಿಸಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಮೇಲ್ಮನೆಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನಪರಿಷತ್‍ನ ಒಟ್ಟು 75 ಸದಸ್ಯ ಬಲದಲ್ಲಿ ಬಿಜೆಪಿಗೆ 40 ಸ್ಥಾನಗಳು ಇರುವುದರಿಂದ ಮುಂಬರುವ ಅಧಿವೇಶನದಲ್ಲಿ ಈ ಕಾಯ್ದೆಯನ್ನು ಮಂಡಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲು ತೀರ್ಮಾನಿಸಿದೆ.
ಕಳೆದ ಅಧಿವೇಶನದ ವೇಳೆಯೇ ಮಸೂದೆಯನ್ನು ಮಂಡಿಸಬೇಕೆಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇದುದ್ದರಿಂದ ಮಸೂದೆ ಮಂಡನೆ ಮಾಡುವ ಪ್ರಸ್ತಾವನೆಯಿಂದ ಬಿಜೆಪಿ ಹಿಂದೆ ಸರಿದಿತ್ತು. ಈಗ ಪರಿಷತ್‍ನಲ್ಲೂ ಸ್ಪಷ್ಟ ಬಹುಮತ ಪಡೆದಿರುವ ಕಾರಣ ಮಸೂದೆ ಮಂಡನೆಗೆ ಎದುರಾಗಿದ್ದ ಆತಂಕ ನಿವಾರಣೆಯಾಗಿದೆ. ಬರುವ ಅಧಿವೇಶನದಲ್ಲಿ ಮಂಡನೆಯಾಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
ಕಳೆದ ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಆದರೆ ಪರಿಷತ್‍ನಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದರ ಪರಿಣಾಮ ಮಸೂದೆ ಅಂಗೀಕಾರಕ್ಕೆ ಸೋಲುಂಟಾಗಿತ್ತು. ಇದು ಬಿಜೆಪಿಗೆ ಭಾರೀ ಮುಜುಗರವನ್ನು ಸೃಷ್ಟಿಸಿತ್ತು.
ಕೆಲ ತಿಂಗಳುಗಳ ಹಿಂದೆ ನಡೆದ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು, ಬಾಬುರಾವ್ ಚಿಂಚನ್‍ಸೂರ್ ಅವಿರೋಧ ಆಯ್ಕೆ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬೆಂಬಲವೂ ಇರುವುದರಿಂದ ಮೇಲ್ಮನೆಯಲ್ಲಿ ಮಸೂದೆ ಅಂಗೀಕಾರಕ್ಕೆ ಇನ್ನು ಮುಂದೆ ಯಾವುದೇ ಪಕ್ಷಗಳ ಬೆಂಬಲ ಪಡೆಯಬೇಕಾದ ಅಗತ್ಯವೂ ಬಿಜೆಪಿಗೆ ಎದುರಾಗುವುದಿಲ್ಲ.
ಬೆಳಗಾವಿಯಲ್ಲಿ ಕಳೆದ ಡಿಸೆಂಬರ್‍ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ (2021ರ ಡಿಸೆಂಬರ್ 23) ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಿ ಸರ್ಕಾರ ಅಂಗೀಕಾರ ಪಡೆದಿತ್ತು. ಆದರೆ, ಕಾಂಗ್ರೆಸ್, ಜೆಡಿಎಸ್ ಸದಸ್ಯರ ತೀವ್ರ ವಿರೋಧ ಮತ್ತು ಅಗತ್ಯ ಬಲ ಇಲ್ಲದೇ ಇದ್ದ ಕಾರಣ ವಿಧಾನ ಪರಿಷತ್‍ನಲ್ಲಿ ಮಸೂದೆ ಮಂಡಿಸಿರಲಿಲ್ಲ.
ಕಾಯ್ದೆ ಜಾರಿ ವಿಳಂಬವಾಗಬಾರದು ಎನ್ನುವ ಕಾರಣಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ ಮೇಲ್ಮನೆಯಲ್ಲಿ ಬಹುಮತ ಬಂದಿರುವ ಕಾರಣ ಮಂಡಿಸಿ ಚರ್ಚೆ ನಂತರ ಅಂಗೀಕರಿಸಲು ತೀರ್ಮಾನಿಸಿದೆ. ನಂತರ ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಿ ಕೊಡಲಾಗುತ್ತದೆ.
ಆಮಿಷ, ಪ್ರಲೋಭನೆ, ಉದ್ಯೋಗ, ಉಚಿತ ಶಿಕ್ಷಣ, ನಗದು, ಮದುವೆ ಆಗುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿಯ ಭರವಸೆ, ದೈವಿಕ ಸಂತೋಷ, ಒತ್ತಾಯ, ವಂಚನೆ ಮೂಲಕ ಮತಾಂತರ ಮಾಡುವುದನ್ನು ನಿಷೇಧಿಸುವ ಅಂಶ ಈ ಕಾಯ್ದೆಯಲ್ಲಿದೆ. ಯಾವುದೇ ಒಂದು ಧರ್ಮದ ಆಚರಣೆಗಳನ್ನು ಅವಹೇಳನ ಮಾಡುವುದನ್ನೂ ಆಮಿಷ ಎಂದೇ ಪರಿಗಣಿಸಲಾಗಿದೆ.
ವ್ಯಕ್ತಿಯೊಬ್ಬ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾದಾಗ ಮಾತ್ರ ಕಾಯ್ದೆ ಅನ್ವಯವಾಗಲಿದೆ. ಆದರೆ, ಯಾವುದೋ ಕಾರಣಕ್ಕೆ ಮತಾಂತರಗೊಂಡು, ಮರಳಿ ಮಾತೃಧರ್ಮಕ್ಕೆ ಬರುವುದಾದರೆ ಈ ಕಾಯ್ದೆ ಅನ್ವಯವಾಗುವುದಿಲ್ಲ. ಮತಾಂತರ ಮಾಡಿದರೆ ದಂಡ ಮತ್ತು ಜೈಲು ಶಿಕ್ಷೆ ವಿಸಲಾಗುತ್ತದೆ.
ವಿಧಾನಸಭೆಯಿಂದ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕರ ಸಂಖ್ಯಾಬಲಕ್ಕೆ ಅನುಗುಣವಾಗಿ 4 ಸೀಟುಗಳನ್ನು ಮತ್ತು ಶಿಕ್ಷಕರ, ಪದವೀಧರರ 4 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 2 ಸೀಟುಗಳನ್ನು ಗೆದ್ದು ಮೇಲ್ಮನೆಯಲ್ಲಿ ತನ್ನ ಸಂಖ್ಯಾಬಲ 39ಕ್ಕೆ ವೃದ್ಧಿಸಿಕೊಂಡಿತ್ತು.
75 ಸದಸ್ಯ ಬಲದ ವಿಧಾನಪರಿಷತ್ತಿನಲ್ಲಿ ಬಿಜೆಪಿ – 40, ಕಾಂಗ್ರೆಸ್ – 27, ಜೆಡಿಎಸ್ – 7 , ಪಕ್ಷೇತರ – 1 ಬಲಾಬಲ ಹೊಂದಿವೆ. ಸದ್ಯದ ಪರಿಸ್ಥಿತಿಯಲ್ಲಿ ಬಹುಮತಕ್ಕೆ 37 ಸದಸ್ಯರ ಅಗತ್ಯತೆ ಇತ್ತು. ಮೂರು ಸ್ಥಾನ ಹೆಚ್ಚು ಗೆಲ್ಲುವುದರೊಂದಿಗೆ ಬಿಜೆಪಿ ನಿಚ್ಚಳ ಬಹುಮತ ಪಡೆದುಕೊಂಡಿದೆ.