ಸಭಾಪತಿ ಸ್ಥಾನಕ್ಕೆ RSS ಅಡ್ಡಿ, ಹೊರಟ್ಟಿ ಅತಂತ್ರ

Social Share

ಬೆಂಗಳೂರು,ಸೆ.21- ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಪರಿಷತ್‍ನ ಸಭಾಪತಿ ಸ್ಥಾನಕ್ಕೆ ನೇಮಿಸಲು ಮೂಲ ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರು ವಿರೋಧಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ಶಾಸಕ ಜಗದೀಶ್ ಶೆಟ್ಟರ್ ಅವರು ಬಸವರಾಜ ಹೊರಟ್ಟಿ ಅವರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಬಸವರಾಜ ಹೊರಟ್ಟಿ ಅವರನ್ನು ಮತ್ತೆ ವಿಧಾನಪರಿಷತ್ತಿನ ಸಭಾಪತಿಯನ್ನಾಗಿ ಮಾಡುವುದಾಗಿ ಕೊಟ್ಟ ಭರವಸೆಯಿಂದ ಆಡಳಿತಾರೂಢ ಬಿಜೆಪಿ ಹಿಂದೆ ಸರಿಯುತ್ತಿರುವಂತೆ ಕಾಣುತ್ತಿದ್ದು, ಹೊರಟ್ಟಿ ಅವರ ಸ್ಥಿತಿ ಅತಂತ್ರತೆಯತ್ತ ಸಾಗುತ್ತಿದೆ. ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಬೆನ್ನಲ್ಲೇ ತಟಸ್ಥ ನೀತಿ ಅನುಸರಿಸುತ್ತಿರುವ ಬಿಜೆಪಿಯ ಧೋರಣೆ ಬಗ್ಗೆ ಹೊರಟ್ಟಿ ಅವರು ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : BREAKING : ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ವಿಧಿವಶ

ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಬುಧವಾರವೇ ಪರಿಷತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಸೆಪ್ಟೆಂಬರ್ 14 ರಂದು ಸಭೆ ಸೇರಿದ್ದ ಸಚಿವ ಸಂಪುಟವು ರಾಜ್ಯಪಾಲರ ಒಪ್ಪಿಗೆಗಾಗಿ ಪ್ರಸ್ತಾವನೆಯನ್ನು ಕಳುಹಿಸಲು ನಿರ್ಧರಿಸಿತ್ತು.

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಪ್ರಸ್ತಾವನೆ ಕಳುಹಿಸದಂತೆ ಕಾನೂನು ಸಚಿವ ಜೆ.ಸಿ.ಮಾಧು ಸ್ವಾಮಿ ಅವರಿಗೆ ಸೂಚಿಸಿದ್ದಾರೆ. ಆದರೆ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಮಾಧು ಸ್ವಾಮಿ ಹೇಳಿದ ಹಿನ್ನೆಲೆಯಲ್ಲಿ, ಕಟೀಲ್ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ ನಂತರ ಪ್ರಸ್ತಾವನೆ ತಡೆ ಹಿಡಿಯಲಾಗಿದೆ.

ಈಗ ಅಧಿವೇಶನ ಮುಗಿದಲ್ಲಿ ಮತ್ತೆ ವಿಧಾನಪರಿಷತ್ತಿನ ಅವೇಶನ ಆರಂಭವಾಗುವವರೆಗೆ ಸಭಾಪತಿ ಸ್ಥಾನದ ಚುನಾವಣೆ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಇಲ್ಲದಿದ್ದರೆ ಚುನಾವಣೆಗಾಗಿಯೇ ಒಂದು ದಿನದ ವಿಶೇಷ ಅಧಿವೇಶನ ಕರೆಯಬೇಕಾಗುತ್ತದೆ. ಒಟ್ಟಾರೆ ಬಿಜೆಪಿ ನಾಯಕರು ತಾವು ನೀಡಿದ ಭರವಸೆಯಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಹೊರಟ್ಟಿ ಅಸಮಾಧಾನಗೊಂಡಿದ್ದಾರೆ.

ಆದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಬೊಮ್ಮಾಯಿ, ಜೋಶಿ ಮತ್ತು ಶೆಟ್ಟರ್ ಅವರೊಂದಿಗೆ ಮಾತನಾಡುವಂತೆ ಹೊರಟ್ಟಿ ಅವರಿಗೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

ಸೋಮವಾರ ಹೊರಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಸ್ಪಷ್ಟತೆ ನೀಡದ ಮುಖ್ಯಮಂತ್ರಿಗಳು ಪಕ್ಷದ ನಾಯಕರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಯಾವುದಕ್ಕೂ ನೀವು ಆತಂಕಕ್ಕೆ ಒಳಗಾಗುವುದು ಬೇಡ. ಹಿಂದೆ ನೀಡಿದ ಭರವಸೆಯಂತೆ ನಡೆದುಕೊಳ್ಳಲಾಗುವುದು ಎಂದು ಸಮಜಯಿಷಿ ನೀಡಲು ಪ್ರಯತ್ನಿಸಿದರು ಎನ್ನಲಾಗಿದೆ

Articles You Might Like

Share This Article