ಬೆಂಗಳೂರು,ಸೆ.20-ವಿಧಾನಪರಿಷತ್ ಸಭಾಪತಿ ಸ್ಥಾನದ ಚುನಾವಣೆ ನಡೆಸುವ ಕುರಿತು ಸರ್ಕಾರ ನಿಲುವು ಏನೆಂಬುದು ಇಂದು ಗೊತ್ತಾಗಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಗುರುವಾರ ಸಭಾಪತಿ ಸ್ಥಾನದ ಚುನಾವಣೆ ನಡೆದು ಬಿಜೆಪಿಯ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರು ಆಯ್ಕೆಯಾಗುವ ಸಂಭವವೇ ಹೆಚ್ಚಾಗಿತ್ತು.
ಆದರೆ ಬಿಜೆಪಿಯಲ್ಲಿ ನಡೆದ ಕೆಲವು ಮಿಂಚಿನ ಬೆಳವಣಿಗೆಯಿಂದ ಹೊರಟ್ಟಿಗೆ ಸಭಾಪತಿ ಸ್ಥಾನ ಸಿಗುವುದೇ ಅನುಮಾನವಾಗಿದೆ. ಏಕೆಂದರೆ ಪಕ್ಷದಲ್ಲಿರುವ ಕೆಲವು ಹಿರಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗುರುವಾರದೊಳಗೆ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂದು ಕಾನೂನು ಸಚಿವ ಮಾಧುಸ್ವಾಮಿ ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದ್ದಾರೆ.
ಒಂದು ವೇಳೆ ಈ ಅಧಿವೇಶನದಲ್ಲಿ ಚುನಾವಣೆ ನಡೆಯದಿದ್ದರೆ ಮುಂದಿನ ಬೆಳಗಾವಿ ಅಧಿವೇಶನದವರೆಗೆ ಸಾಧ್ಯಗುವುದಿಲ್ಲ. ಇಲ್ಲದಿದ್ದರೆ ಇದಕ್ಕಾಗಿಯೇ ಒಂದು ದಿನದ ವಿಶೇಷ ಅಧಿವೇಶನ ಕರೆಯಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.
ಹೀಗಾಗಿ ರಾಜ್ಯ ಸರ್ಕಾರ ಸಂಜೆಯವರೆಗೆ ಚುನಾವಣೆ ನಡೆಸುವ ಕುರಿತು ತನ್ನ ನಿಲುವನ್ನು ಪ್ರಕಟಿಸಲಿದೆ. ಒಂದು ವೇಳೆ ಬಿಜೆಪಿ ಹಿರಿಯ ನಾಯಕರು ಸಮ್ಮತಿಸಿದರೆ ಹೊರಟ್ಟಿಯವರೇ ಅಭ್ಯರ್ಥಿಯಾಗುವುದು ಖಚಿತ.
ಸ್ವಪಕ್ಷೀಯರಿಗೆ ಸಭಾಪತಿ ಸ್ಥಾನ ನೀಡಬೇಕೆಂದು ವರಿಷ್ಠರು ಸೂಚನೆ ಕೊಟ್ಟರೆ ರಾಜಕೀಯ ಲೆಕ್ಕಾಚಾರ ಏರುಪೇರಾಗಲಿದೆ. ಹಂಗಾಮಿ ಸಭಾಪತಿ ರಘುನಾಥ್ ಮಲ್ಕಾಪುರೆ, ಸದಸ್ಯರಾದ ಅಯನೂರ್ ಮಂಜುನಾಥ್, ಸುಶೀಲ್ ನಮೋಶಿ ಮತ್ತಿತರರು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಕೇಂದ್ರ ಬಿಜೆಪಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದಿನ ವಿಧಾನಪರಿಷತ್ ಸಭಾಪತಿ ಯಾರಾಗಾಲಿದ್ದಾರೆ ಎಂಬುದು ಗೊತ್ತಾಗಲಿದೆ.