ಬೆಂಗಳೂರು,ಸೆ.20- ಕಡತ ವಿಲೇವಾರಿಗೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಸರ್ಕಾರದ ಹಾಲಿ ಸಚಿವರು, ಮಾಜಿ ಸಚಿವರು ಮಾಡಿದ ಆರೋಪ ವಿಧಾನ ಪರಿಷತ್ ನಲ್ಲಿ ಕೋಲಾಹಲದ ವಾತಾವರಣ ನಿರ್ಮಿಸಿತು. ಪ್ರಶ್ನೋತ್ತರದಲ್ಲಿ ಸದಸ್ಯ ಸುನೀಲ್ ವಲ್ಯಾಪುರ್ ಅವರು ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಉತ್ತರ ನೀಡಿದ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರಿ ವಲಯದ ಯಾವುದೇ ಸಕ್ಕರೆ ಕಾರ್ಖಾನೆಗಳು ಇಲ್ಲ. 3 ಸಹಕಾರಿ, 10 ಖಾಸಗಿ ಕಾರ್ಖಾನೆಗಳಿವೆ. ಆರಕ್ಕೆ ಎಥೆನಾಲ್ ಉತ್ಪಾದನೆಗೆ ಅವಕಾಶ ಇದೆ. ಉಳಿದವಕ್ಕೂ ಎಥೆನಾಲ್ ಉತ್ಪಾದನೆಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗುವುದು. ಎಥೆನಾಲ್ ನೀತಿ ತಯಾರಿಕೆ ಸಮಿತಿ ರಚಿಸಲಾಗಿದೆ ಎಂದರು.
ಆಗ ಮಧ್ಯ ಪ್ರವೇಶ ಮಾಡಿದ ಆಡಳಿತ ಪಕ್ಷದ ಸದಸ್ಯ ಲಕ್ಷ್ಮಣ ಸವದಿ, ಎಥೆನಾಲ್ ತಯಾರಿಕೆಯಾಗಿ ತಿಂಗಳಾದರೂ ಜಂಟಿ ಒಪ್ಪಂದವಾಗಿಲ್ಲ. ಮೂರು ತಿಂಗಳ ಹಿಂದೆ ಕಡತ ಮಂಡನೆಯಾಗಿದೆ. ಈವರೆಗೂ ಎಥೆನಾಲ್ ಖರೀದಿಗೆ ಒಪ್ಪಂದವಾಗಿಲ್ಲ, ಕಾರ್ಖಾನೆಯಿಂದ ಎಥೆನಾಲ್ ಖರೀದಿಸಿ ಮಾಲೀಕರಿಗೆ ಹಣ ನೀಡಿದರೆ, ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಗೆ ಸಹಾಯವಾಗುತ್ತದೆ ಎಂದರು.
ಸ್ಪಷ್ಟನೆ ನೀಡಿದ ಸಚಿವರು, ಎಥೆನಾಲ್ ಅನ್ನು ತೈಲ ಕಂಪೆನಿಗಳು ಖರೀದಿಸುತ್ತವೆ. ಅಬಕಾರಿ ಇಲಾಖೆಯ ಸಹಯೋಗವೂ ಇದೆ. ಹೀಗಾಗಿ ಶೀಘ್ರವೇ ಮೂರು ಇಲಾಖೆಗಳ ಜೊತೆ ಸಹಯೋಗ ನಡೆಸಿ, ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು.
ಆಗ ಎದ್ದು ನಿಂತ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಕ್ಕರೆ ಇಲಾಖೆಯಲ್ಲಿ ಪಂಕಜ್ ಕುಮಾರ್ ಪಾಂಡೆ ಎಂಬ ಕಾರ್ಯದರ್ಶಿ ಇದ್ದಾರೆ. ಈ ಸದನದಲ್ಲೇ ಅವರು ಕುಳಿತಿದ್ದಾರೆ. ತಮ್ಮ ಒಡೆತನದ ನಿರಾಣಿ ಶುಗರ್ಸ್ ಕಂಪೆನಿ, ಪಾಂಡವಪುರ ಕಾರ್ಖಾನೆ ಭೋಗ್ಯ ಪಡೆದು ಎರಡು ವರ್ಷವಾಗಿದೆ.
ಈವರೆಗೂ ಒಪ್ಪಂದವಾಗಿಲ್ಲ. ಒಪ್ಪಂದ ಇಲ್ಲದೆ ನಾವು 50 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿ, ರೈತರ ಕಬ್ಬಿಗೆ ರಸೀದಿ ಹಾಕುತ್ತಿದ್ದೇವೆ. ಮುಖ್ಯಮಂತ್ರಿ ಸೂಚನೆ ನೀಡಿದರೂ ಈವರೆಗೂ ಒಪ್ಪಂದವಾಗಿಲ್ಲ. ಸಚಿವನಾಗಿ ನಾನು ಈ ಮಾತನ್ನು ಹೇಳಬೇಕೋ ಬೇಡವೋ ಅರ್ಥವಾಗುತ್ತಿಲ್ಲ ಎಂದಾಗ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಪ್ರತಿಪಕ್ಷಗಳ ಸದಸ್ಯರು, ಮಂತ್ರಿಗಳ ಪರಿಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ್ದಲ್ಲದೆ, ಸಚಿವರು ಅವರೇ ತಮ್ಮ ಸರ್ಕಾರದ ಅಧಿಕಾರಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಇದಕ್ಕೆ ಸಮಂಜಸ ಉತ್ತರ ಸಿಗದಿದ್ದರೆ ನಾವು ಧರಣಿ ನಡೆಸಬೇಕಾಗುತ್ತದೆ ಎಂದು ಪಟ್ಟು ಹಿಡಿದರು.
ಸಭಾಪತಿ ಪ್ರತಿಪಕ್ಷಗಳ ಗದ್ದಲವನ್ನು ಸಮಾಧಾನ ಪಡಿಸಿ, ಕಾಂಗ್ರೆಸ್ ನ ಪ್ರಕಾಶ್ ರಾಥೋಡ್ ರಿಗೆ ಮಾತನಾಡಲು ಅವಕಾಶ ನೀಡಿದರು. ಆಗ ಪ್ರಕಾಶ್ ರಾಥೋಡ್, ಸಚಿವರು ಅಕಾರಿಯನ್ನು ಹೊಣೆ ಮಾಡಿದ್ದಾರೆ. ಸರ್ಕಾರಕ್ಕೆ ದಮ್ ಇದ್ದರೆ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲವಾದರೆ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಆಡಳಿತ ಪಕ್ಷದ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಸಮರವೇ ನಡೆಯಿತು. ಇದು ಪ್ರಶ್ನೋತ್ತರ ಹೆಚ್ಚಿನ ಸಮಯ ಇಲ್ಲ, ಹೆಚ್ಚಿನ ಚರ್ಚೆ ಬೇಕು ಎಂದರೆ ಬೇರೆ ರೂಪದಲ್ಲಿ ಸೂಚನೆ ನೀಡಿ ಎಂದು ಸಭಾಪತಿ ಸಲಹೆ ನೀಡಿದರು.
ಸಚಿವರು ಉತ್ತರ ನೀಡಿ ತೆರೆ ಎಳೆಯಲು ಮುಂದಾದಾಗ ಪ್ರತಿಪಕ್ಷಗಳ ಶಾಸಕರು ಅವಕಾಶ ನೀಡಲಿಲ್ಲ. ಸಚಿವರು ಹಿರಿಯ ಅಧಿಕಾರಿಯ ಮೇಲೆ ದೂರಿದ್ದಾರೆ. ಇದು ಇತ್ಯರ್ಥವಾಗಬೇಕು, ಅಲ್ಲಿವರೆಗೂ ಬಿಡುವುದಿಲ್ಲ ಎಂದು ಜೆಡಿಎಸ್ ನ ಎಸ್.ಎಲï.ಬೋಜೆಗೌಡ ಹಾಗೂ ಇತರರು ಪಟ್ಟು ಹಿಡಿದರು.
ಕಾಂಗ್ರೆಸ್ ನ ಕೆ.ಗೋವಿಂದ ರಾಜು, ಸಕ್ಕರೆ ಸಚಿವರ ಪ್ರಶ್ನೆಗೆ ಕೈಗಾರಿಕಾ ಸಚಿವರು ಮಧ್ಯ ಪ್ರವೇಶ ಮಾಡಿದ್ದ ಸರ್ಕಾರ ಎಡವಲು ಕಾರಣವಾಗಿದೆ ಎಂದಾಗ, ಜೆಡಿಎಸ್‍ನ ತಿಪ್ಪೇಸ್ವಾಮಿ ಆಕ್ಷೇಪಿಸಿದರು. ಇದು ಎಡವಿದ ಪ್ರಶ್ನೆ ಅಲ್ಲ, ಸರ್ಕಾರದ ವೈಫಲ್ಯ. ಸಚಿವರಿಂದ ಸ್ಪಷ್ಟ ಉತ್ತರ ಬೇಕು ಎಂದು ಒತ್ತಾಯಿಸಿದರು. ಆಗ ಗೋವಿಂದರಾಜು ಅವರು ಧ್ವನಿಗೂಡಿಸಿದರು.
ಸಚಿವ ಶಂಕರ ಪಾಟೀಲ್ ಮುನೇನಕೋಪ್ಪ ಉತ್ತರ ನೀಡಲು ಮುಂದಾದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಅವಕಾಶ ನೀಡಲಿಲ್ಲ. ಹಾಲಿ ಸಚಿವರು, ಮಾಜಿ ಸಚಿವರು ಸರ್ಕಾರದಲ್ಲಿ ಕಡತಗಳ ವಿಳಂಬದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇದು ಗಂಭೀರ ವಿಚಾರ ಎಂದರು. ಸಭಾಪತಿ ಅವರು ಪದೇ ಪದೇ ಎದ್ದು ನಿಂತು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಸಂಬಂಧಪಟ್ಟ ಸಚಿವರು ಉತ್ತರ ನೀಡಲಿ ಎಂದು ತಾರ್ಕಿಕ ಅಂತ್ಯಕ್ಕೆ ಯತ್ನಿಸಿದರು.
ಸಭಾನಾಯಕರು ಕೋಟಾ ಶ್ರೀನಿವಾಸ ಪೂಜಾರಿ, ನಮ್ಮ ಸಚಿವರು ಕಾರ್ಯಾಂಗದ ಲೋಪವನ್ನು ಉಲ್ಲೇಖಿಸಿ, ಅಧಿಕಾರಿಗಳು ಕಡತ ವಿಲೇವಾರಿಗೆ ವಿಳಂಬ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸಂಬಂಧ ಪಟ್ಟ ಸಚಿವರು ಉತ್ತರ ನೀಡುತ್ತಾರೆ. ಇದರಲ್ಲಿ ಗಲಾಟೆ ಮಾಡುವಂತದ್ದು ಏನಿದೆ ಎಂದರು.
ಸದಸ್ಯ ಲಕ್ಷ್ಮಣ ಸವದಿ ಮಧ್ಯ ಪ್ರವೇಶ ಮಾಡಿ, ಕಾರ್ಯಾಂಗ, ಶಾಸಕಾಂಗ ಅನೇಕ ದಿನಗಳ ವ್ಯವಸ್ಥೆ ನಡೆದುಕೊಂಡು ಬಂದಿದೆ. ಲೋಪದೋಷಗಳಾದಾಗ ಇಂತಹ ವಿಚಾರಗಳು ಹೊರ ಬರುತ್ತವೆ. ಸಚಿವರಿಗೆ ಘಾಸಿಯಾಗಿ ಈ ರೀತಿ ಮಾತನಾಡಿದ್ದಾರೆ. ಅದನ್ನು ದೊಡ್ಡದಾಗಿ ಬೆಳೆಸುವ ಅಗತ್ಯ ಇಲ್ಲ ಎಂದರು.
ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು, ಸಕ್ಕರೆ ಇಲಾಖೆಯ ಉತ್ತಮ ಕೆಲಸಗಳ ಬಗ್ಗೆ ಸಚಿವ ನಿರಾಣಿ ಅಭಿನಂದನೆ ಸಲ್ಲಿದ್ದಾರೆ. ಜೊತೆ ಅಧಿಕಾರಿಯ ವಿಳಂಬವನ್ನು ಪ್ರಸ್ತಾಪಿಸಿದ್ದಾರೆ. ಪಾಂಡವಪುರ ಸಕ್ಕರೆ ಕಾರ್ಖಾನೆ ಮತ್ತು ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ನಿರಾಣಿ ಗ್ರೂಪ್ ಪಾಂಡವಪುರ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿದೆ.
ನೋಂದಣಿಗೆ ಸ್ಟಾಂಪ್ ಡ್ಯೂಟಿ ವಿನಾಯಿತಿ ಕೇಳಿದ್ದಾರೆ, ಮುಖ್ಯಮಂತ್ರಿ ಸಮ್ಮುಖದಲ್ಲಿ ಎರಡು ಸಭೆಗಳಾಗಿವೆ. ಅಕಾರಿಗಳು ಸರ್ಕಾರದ ನೀತಿ ನಿಯಮ ಪಾಲನೆ ಮಾಡಬೇಕು. ಸ್ಟಾಂಪ್ ವಿನಾಯಿತಿಗೆ ಮತ್ತೊಮ್ಮೆ ಸಂಪುಟದಲ್ಲಿ ಚರ್ಚೆ ಮಾಡಿ, ಮುಖ್ಯಮಂತ್ರಿ ಪರಮಾಕಾರ ಬಳಕೆ ಮಾಡಿ, ವಿನಾಯಿತಿ ನೀಡಲಾಗುವುದು. ಪ್ರಸ್ತುತ ಕಬ್ಬು ಕಾರ್ಖಾನೆ ನಡೆಯುತ್ತಿದೆ, ಕಬ್ಬು ನುರಿಸಲಾಗುತ್ತಿದೆ. ನಿರಾಣಿ ಗ್ರೂಪ್ ಗೆ ಈವರೆಗೂ ಯಾವ ತೊಂದರೆಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವರ ಉತ್ತರ ಒಪ್ಪದೆ ಪ್ರತಿಪಕ್ಷಗಳ ಸದಸ್ಯರು ಗದ್ದಲ ಮಾಡಿದಾಗ, ಸಭಾಪತಿ ಪ್ರಶ್ನೋತ್ತರದಲ್ಲಿ ಹೆಚ್ಚು ಚರ್ಚೆಗೆ ಅವಕಾಶ ಇಲ್ಲ, ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ನೀಡಿ ಎಂದರು. ಇದು ನೋಟಿಸ್ ನೀಡುವ ವಿಷಯ ಅಲ್ಲ. ಈಗಲೇ ಅವಕಾಶ ಕೊಡಿ ಎಂದು ಪ್ರತಿಪಕ್ಷದ ನಾಯಕರು ಪಟ್ಟು ಹಿಡಿದರು. ಸಭಾಪತಿ ಅವರು ಮುಂದಿನ ಪ್ರಶ್ನೆಗೆ ಅರವಿಂದ ಕುಮಾರ್ ಅರಳಿ ಅವರನ್ನು ಆಹ್ವಾನಿಸಿ ಚರ್ಚೆಗೆ ತೆರೆ ಎಳೆದರು.