ಬಹಿರ್ದೆಸೆಗೆ ತೆರಳಿದ್ದ ಯುವಕ ಚಿರತೆ ದಾಳಿಗೆ ಬಲಿ..!

ಕೊಪ್ಪಳ, ನ.5- ಬಹಿರ್ದೆಸೆಗೆ ತೆರಳಿದ್ದ ಯುವಕ ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ದುರ್ಗಾದೇವಿ ದೇವಾಲದ ಬಳಿ ನಡೆದಿದೆ. ಹುಲಗೇಶ್ ಚಿರತೆ ದಾಳಿಗೆ ಬಲಿಯಾದ ಯುವಕ. ಮೃತಪಟ್ಟ ಯುವಕ ದುರ್ಗಾದೇವಿ ದೇವಾಲಯದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ದೇವಾಲಯದ ಕೆಲಸ-ಕಾರ್ಯಗಳನ್ನು ಮುಗಿಸಿಕೊಂಡು ಬಹಿರ್ದೆಸೆಗೆ ತೆರಳಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದ ಚಿರತೆ ಹುಲಿಗೇಶ್‍ನನ್ನು ಎಳೆದೊಯ್ದು ತಿಂದು ಸಾಯಿಸಿದೆ ಎನ್ನಲಾಗಿದೆ.

ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಾಕ್ಕಾಗಮಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ವೃದ್ಧೆ ಹಾಗೂ ಮಗು ಮೇಲೆ ಚಿರತೆ ದಾಳಿ ಮಾಡಿತ್ತು. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಮಾಸುವ ಮುನ್ನವೇ ಈಗ ಯುವಕ ಚಿರತೆ ದಾಳಿಗೆ ಬಲಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದಾರೆ.