ಬೆಳಗಾವಿ,ಆ.12- ಜಿಲ್ಲೆಯಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಮುಂಜಾಗ್ರತಾ ಕ್ರಮವಾಗಿ 52 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕಳೆದ 5ರಂದು ಜಾದವ್‍ನಗರದಲ್ಲಿ ಒಂದು ಚಿರತೆ ಪತ್ತೆಯಾಗಿತ್ತು, ಗಾಲ್ ಮೈದಾನದಲ್ಲಿ ಮತ್ತೊಂದು ಚಿರತೆ ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ನಗರದ 22 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ್ದು, ಇಂದು ಕೂಡ ಮುಂದುವರೆಸಲಾಗಿದೆ. ಮೂಡಲಗಿ ತಾಲ್ಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಶಿವಾಪುರ್, ಮಸಗುಪ್ಪೆ ಗ್ರಾಮದ 30 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಅಲ್ಲದೆ ಧರ್ಮಟ್ಟಿ ಗ್ರಾಮದ ತೋಟದ ಮನೆಗೆ ನುಗ್ಗಿದ ಚಿರತೆ ಮೇಕೆಯನ್ನು ಹೊತ್ತೊಯ್ದಿತ್ತು. ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಶೋಧಕಾರ್ಯ ಮುಂದುವರೆಸಿದ್ದಾರೆ. ಇಲ್ಲಿಯವರೆಗೂ ಚಿರತೆಗಳು ಪತ್ತೆಯಾಗಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುತ್ತಿದ್ದಾರೆ.
ಅಲ್ಲದೆ, ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ 52 ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.