11.5 ಕೋಟಿಗೆ ಸೇಲ್ ಆದ ಇಂಗ್ಲೆಂಡ್ ಆಲ್‍ರೌಂಡರ್ ಲಿವಿಂಗ್‍ಸ್ಟನ್‍

Social Share

ಬೆಂಗಳೂರು, ಫೆ. 13- ಕ್ರಿಕೆಟ್ ಆಟಗಾರರಿಗೆ ಕೋಟಿಗಳ ಕುಳಗಳಾಗುವ ಅದೃಷ್ಟ ಒದಗಿಸಿಕೊಡುವ ಐಪಿಎಲ್‍ನ 2ನೆ ದಿನವೂ ಘಟಾನುಘಟಿಗಳು ಕೋಟಿಗಳ ಲೆಕ್ಕದಲ್ಲಿ ಬಿಕರಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್ ಮೊದಲ ದಿನದ ಹರಾಜಿನಲ್ಲಿ ಯುವ ಆಟಗಾರರಾದ ಭಾರತದ ಇಶಾನ್ ಕಿಶನ್ (15.25 ಕೋಟಿ), ದೀಪಕ್ ಚಹಾರ್ ( 14 ಕೋಟಿ), ಶ್ರೇಯಾಸ್ ಅಯ್ಯರ್ (12.25 ಕೋಟಿ), ಹರ್ಷಲ್‍ಪಟೇಲ್ (10.75 ಕೋಟಿ), ಶಾರ್ದೂಲ್ ಠಾಕೂರ್ (10.75ಕೋಟಿ) ದೇಶಿ ಕ್ರಿಕೆಟಿಗರೇ 10 ಕೋಟಿಗೂ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರೆ, ಎರಡನೇ ದಿನದ ಬಿಡ್ಡಿಂಗ್‍ನ ಆರಂಭದಲ್ಲೇ ಇಂಗ್ಲೆಂಡ್‍ನ ಆಲ್‍ರೌಂಡರ್ ಲಿವಿಂಗ್‍ಸ್ಟನ್ ಅವರು 11.50 ಕೋಟಿಗಳಿಗೆ ಕಿಂಗ್ ಪಂಜಾಬ್ಸ್ ಪಾಲಾದರು.
ಲಿವಿಂಗ್‍ಸ್ಟನ್‍ಗೆ ಭರ್ಜರಿ ಪೈಪೋಟಿ:
ಟ್ವೆಂಟಿ-20 ಮಾದರಿಯ ಕ್ರಿಕೆಟ್‍ನಲ್ಲಿ ಬಹುಮೂಲ್ಯ ಆಟಗಾರರಾಗಿರುವ ಲಿವಿಂಗ್‍ಸ್ಟನ್‍ರನ್ನು ಬಿಕರಿ ಮಾಡಿಕೊಳ್ಳಲು ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ಗುಜರಾತ್ ಟೈಟಾನ್ಸ್ ಹಾಗೂ ಸನರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿಗಳು ಕೂಡ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪೈಪೋಟಿ ನಡೆಸಿದರೂ ಅಂತಿಮವಾಗಿ 11.50 ಕೋಟಿಯನ್ನು ಜೇಬಿಗಿರಿಸಿಕೊಂಡ ಲಿವಿಂಗ್‍ಸ್ಟನ್ ಕಿಂಗ್ ಪಂಜಾಬ್ ಪಾಲಾದರು.
ದುಬೆಗೆ 4 ಕೋಟಿ:
ಐಪಿಎಲ್‍ನ 4 ಬಾರಿ ಚಾಂಪಿಯನ್ಸ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಲೌಂಡರ್ ವಿಜಯಶಂಕರ್ ಅವರನ್ನು ಕೊಂಡುಕೊಳ್ಳಲು ಪೈಪೋಟಿ ನಡೆಸಿ ವಿಫಲರಾದರೂ ಶಿವಂ ದುಬೆಗೆ 4 ಕೋಟಿ ರೂ.ಗಳನ್ನು ಖರ್ಚು ಮಾಡುವ ಮೂಲಕ ತಮ್ಮ ತಂಡದ ಸದಸ್ಯರನ್ನಾಗಿ ಮಾಡಿಕೊಂಡರು.
ಮಾರ್ಕೊ ಜೇಸೆನ್‍ಗೆ 4.2 ಕೋಟಿ:
ಭಾರತ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿ ಹರಿಣಿಗಳಿಗೆ ಸರಣಿ ಜಯ ತಂದುಕೊಟ್ಟಿದ್ದ ಬಲಗೈ ವೇಗಿ ಮಾರ್ಕೊ ಜೇಸೆನ್ ಅವರು ಸನ್‍ರೈಸರ್ಸ್ ಹೈದ್ರಾಬಾದ್ ತಂಡದ ಪಾಲಾಗಿದ್ದು, ಅದಕ್ಕಾಗಿ ಆ ತಂಡದ ಫ್ರಾಂಚೈಸಿಗಳು 4.2 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ.
ಓಡೆನ್ ಸ್ಮಿತ್‍ಗೆ 6 ಕೋಟಿ:
ಭಾರತದ ವಿರುದ್ಧದ ಏಕದಿನ ಸರಣಿಗಳಲ್ಲಿ ಸಿಕ್ಸರ್ ಸುರಿಮಳೆ ಸುರಿಸುವ ಮೂಲಕ ಗಮನ ಸೆಳೆದಿದ್ದ ವೆಸ್ಟ್‍ಇಂಡೀಸ್ ದೈತ್ಯ ಆಟಗಾರ ಓಡೆನ್ ಸ್ಮಿತ್ ಅವರು 6 ಕೋಟಿ ರೂ.ಗಳಿಗೆ ಕಿಂಗ್ಸ್ ಪಂಜಾಬ್ ತಂಡದ ಪಾಲಾಗಿದ್ದಾರೆ, ಈ ಮುನ್ನ ಈ ತಂಡವು ಲಿವಿಂಗ್‍ಸ್ಟನ್‍ಗೆ 11.50 ಕೋಟಿ ಖರ್ಚು ಮಾಡಿ ತನ್ನ ತಂಡಕ್ಕೆ ಸೆಳೆದುಕೊಂಡಿತ್ತು.
ಭಾರತದ ಅಲೌಂಡರ್‍ಗಳಾದ ಜಯಂತ್ ಯಾದವ್ (1.70 ಕೋಟಿ), ವಿಜಯಶಂಕರ್ (1.40 ಕೋಟಿ) ಡೊಮಿನಿಕ್ ಡ್ರೇಕ್ಸ್ (1.10 ಕೋಟಿ) ಗುಜರಾತ್ ಟೈಟಾನ್ಸ್ ಪಾಲಾದರೆ, ಮಂದೀಪ್ ಸಿಂಗ್ (1.10 ಕೋಟಿ) ಡೆಲ್ಲಿ ಕ್ಯಾಪಿಟಲ್ಸ್, ಅಜೆಂಕಾ ರಹಾನೆ (1 ಕೋಟಿ) ಕೋಲ್ಕತ್ತಾ ನೈಟ್‍ರೈಡರ್ಸ್ , ದಕ್ಷಿಣ ಆಫ್ರಿಕಾದ ಅದಿಲ್ ಮಕ್ರಂ (2.60 ಕೋಟಿ) ಎಸ್‍ಆರ್‍ಎಚ್ ಪಾಲಾಗಿದ್ದಾರೆ.

Articles You Might Like

Share This Article