ಬೆಂಗಳೂರು, ಜ.23- ಟ್ರಾನ್ಸ್ಫಾರಂನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಕರ್ತವ್ಯದಲ್ಲಿದ್ದ ಲೈನ್ಮೆನ್ವೊಬ್ಬರು ಟ್ರಾನ್ಸ್ಫಾರಂ ಹತ್ತಿದಾಗ ಕೈಗೆ ವಿದ್ಯುತ್ ತಗಲಿ ಕೆಳಗೆ ಬಿದ್ದು, ಮೃತಪಟ್ಟಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸುಂಕದಕಟ್ಟೆಯ ನಿವಾಸಿ ಗೌತಮ್(26) ಮೃತಪಟ್ಟ ಲೈನ್ಮೆನ್. ಇವರು ಮೂಲತಃ ಮಾಗಡಿ ತಾಲೂಕಿನವರು.
ಗೋಪಾಲಪುರದ ಪೊಲೀಸ್ ಚೌಕಿ ಬಳಿಯ ಟ್ರಾನ್ಸ್ಫಾರಂನಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ
ಬೆಂಕಿ ಕಾಣಿಸಿಕೊಂಡಿದೆ. ಆ ವೇಳೆ ಸಾರ್ವಜನಿಕರು ನೋಡಿ ತಕ್ಷಣ ಅಂಜನಾ ಚಿತ್ರ ಮಂದಿರದ ಬಳಿ ಇರುವ ಬೆಸ್ಕಾಂಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಲೈನ್ಮೆನ್ ಗೌತಮ್, ಸಿದ್ಧರಾಮ ಹಾಗೂ ಮತ್ತೊಬ್ಬರು ಟ್ರಾನ್ಸ್ಫಾರಂನಲ್ಲಿ ಬೆಂಕಿ ಹೊತ್ತಿಕೊಂಡಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದಾರೆ.
ಹೆಂಡತಿ-ಮಕ್ಕಳನ್ನು ಕೊಂದು ಹೂತಿಟ್ಟ ಪತಿ, 2 ತಿಂಗಳ ನಂತರ ಪ್ರಕರಣ ಬೆಳಕಿಗೆ
ಕರ್ತವ್ಯನಿರ್ವಹಿಸುವಾಗ ಒಂದು ಲೈನ್ನ ವಿದ್ಯುತ್ ಮಾತ್ರ ಕಡಿತಗೊಳಿಸಲಾಗಿತ್ತು. ಮತ್ತೊಂದು ಲೈನ್ನ ವಿದ್ಯುತ್ ಕಡಿತಗೊಳಿಸಿರಲಿಲ್ಲ. ಇದು ಗೌತಮ್ ಅವರ ಗಮನಕ್ಕೆ ಬಂದಿಲ್ಲ. ಗೌತಮ್ ಅವರು ಏಕಾಏಕಿ ಟ್ರಾನ್ಸ್ಫಾರಂ ಹತ್ತುತ್ತಿದ್ದಂತೆ ಅವರ ಕೈಗೆ ವಿದ್ಯುತ್ ತಾಗಿದ್ದರಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಸುಗುಣ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಗೌತಮ್ ಅವರ ತಂದೆ ಮಾಗಡಿ ರಸ್ತೆಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Linemen, killed, Bengaluru,