ಸೋಷಿಯಲ್ ಮೀಡಿಯಾದಲ್ಲಿ ಸಂಗೊಳ್ಳಿರಾಯಣ್ಣ, ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಪೋಸ್ಟ್ : ಲಿಂಗಸುಗೂರು ಉದ್ವಿಗ್ನ

ರಾಯಚೂರು,ಆ.26- ಫೇಸ್‍ಬುಕ್‍ನಲ್ಲಿ ವಾಲ್ಮೀಕಿ, ಶಿವಾಜಿ, ಸಂಗೊಳ್ಳಿ ರಾಯಣ್ಣ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳು ಲಿಂಗಸಗೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಕಲ್ಲುತೂರಾಟ, ಟೈರ್‍ಗೆ ಬೆಂಕಿ ಹಚ್ಚಿ, ಪೊಲೀಸ್ ಜೀಪ್ ಜಖಂ ಮಾಡಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಹರಿದಾಡುತ್ತಿದ್ದಂತೆ ಆಕ್ರೋಶಗೊಂಡ ಕೆಲ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೇ ಟೈರ್‍ಗಳಿಗೆ ಬೆಂಕಿಯಿಟ್ಟ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿತು. ಪೊಲೀಸ್ ಜೀಪ್ ಕೂಡ ಜಖಂಗೊಂಡಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹಲವರನ್ನು ಬಂಧಿಸಿದರು.

ಬಂಧನದ ಬಳಿಕವೂ ಗಲಾಟೆ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ನಾಳೆಯವರೆಗೂ ನಿಷೇಧಾಜ್ಞಾ ಜಾರಿಗೊಳಿಸಲಾಗಿದೆ.ಪಟ್ಟಣದಲ್ಲಿ ಬಸ್ ಓಡಾಟ ಸ್ಥಗಿತಗೊಂಡಿದ್ದು, ಬದಲಿ ಮಾರ್ಗಗಳ ಮುಖಾಂತರ ಬಸ್ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಪರಿಸ್ಥಿತಿ ತಹಬದಿಗೆ ಬಂದಿದ್ದರೂ, ಬೂದಿ ಮುಚ್ಚಿದ ಕೆಂಡದಂತಿದೆ.

ನಿನ್ನೆಯ ಘಟನೆಯಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಪೊಲೀಸರು ಅವಹೇಳನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.