ಬೆಂಗಳೂರು,ಸೆ.24-ಯಾರೇ ಲಿಂಗಾಯಿತ ಸಮುದಾಯದಿಂದ ಮುಖ್ಯಮಂತ್ರಿಯಾದರೂ ಸಹಿಸದ ಕಾಂಗ್ರೆಸ್‍ನವರು ಅವರನ್ನೇ ಟಾರ್ಗೆಟ್ ಮಾಡಿಕೊಂಡು ಬರುತ್ತಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಪ್ರತಿಯೊಂದು ಹಂತದಲ್ಲೂ ಲಿಂಗಾಯಿತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅಪಪ್ರಚಾರ ನಡೆಸುವ ಹೀನಕೃತ್ಯ ನಡೆಸಿದ್ದಾರೆ. ಇದರ ಬಗ್ಗೆ ಆ ಸಮುದಾಯ ಎಚ್ಚರವಾಗಿರಬೇಕೆಂದು ಮನವಿ ಮಾಡಿದರು.
ವೀರೇಂದ್ರ ಪಾಟೀಲ್, ಕೆಂಗಲ್ ಹನುಮಂತಯ್ಯ ಸೇರಿದಂತೆ ಮತ್ತಿತರರ ವಿರುದ್ಧ ಅಪಪ್ರಚಾರ ನಡೆಸಿದ್ದರು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೂ ಇದೇ ಕೆಲಸ ಮಾಡುತ್ತಿದ್ದಾರೆ. ಜನ ಬಹಳ ಬುದ್ದಿವಂತರಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಮುಖ್ಯಮಂತ್ರಿ ವಿರುದ್ಧ ಪೋಸ್ಟರ್ ಅಂಟಿಸಿ ಅಭಿಯಾನ ನಡೆಸುತ್ತಾರೆ ಎಂಬುದು ಕಾಂಗ್ರೆಸ್‍ಗೆ ಎಂಥ ಹೀನಾಯ ಸ್ಥಿತಿ ಬಂದಿರಬಹುದು. ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕ ಹುದ್ದೆ. ಅಲ್ಲಿ ಬೊಮ್ಮಾಯಿ ಇರುತ್ತಾರೋ, ನಾನು ಇರುತ್ತೇನೆಯೋ ಎಂಬುದು ಮುಖ್ಯವಲ್ಲ. ಆ ಸ್ಥಾನಕ್ಕೆ ಗೌರವ ಕೊಡುವುದು ಮುಖ್ಯ ಎಂದರು.
ಇವರ ರಾಜಕೀಯ ಡೊಂಬರಾಟಕ್ಕೆ ಜನ ಸೊಪ್ಪು ಹಾಕುವುದಿಲ್ಲ. ನೀವು ಎಷ್ಟೇ ತಿಪ್ಪರಲಾಗ ಹೊಡೆದರೂ ಅಧಿಕಾರಕ್ಕೆ ಬರುವುದಿಲ್ಲ. ಏಕೆಂದರೆ ಜನರ ವಿಶ್ವಾಸವನ್ನು ಕಳೆದುಕೊಂಡಿರುವ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಭೇಟಿ ಕುರಿತು ಮಾತನಾಡಿದ ಸುಧಾಕರ್, ಇದೊಂದು ಸೌಹಾರ್ದಯುತವಾದ ಭೇಟಿ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಮೊದಲಿನಿಂದಲೂ ನಮಗೂ ಅವರಿಗೂ ಆತ್ಮೀಯವಾದ ಒಡನಾಟವಿದೆ. ಹಾಗಾಗಿ ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.