ಬೆಂಗಳೂರಿನ ಮನೆಯೊಂದರಲ್ಲಿ ಪತ್ತೆಯಾಯ್ತು 85 ಲೀಟರ್ ಟಾಪ್ ಕ್ವಾಲಿಟಿ ಮದ್ಯ..!

ಬೆಂಗಳೂರು, ಡಿ.31- ಹೊಸ ವರ್ಷಾಚರಣೆಗಾಗಿ ಮಿಲಿಟರಿ ಕ್ಯಾಂಟೀನ್‍ನಿಂದ ಖರೀದಿ ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದ 85 ಲೀಟರ್ ಮದ್ಯವನ್ನು ವಿಜಯನಗರ ಉಪ ವಿಭಾಗದ ಅಪರಾಧ ಪತ್ತೆದಳ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಬಸವೇಶ್ವರನಗರ ಮತ್ತು ಮಾಗಡಿ ರಸ್ತೆ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 114 ಬಾಟಲ್ ಮದ್ಯವನ್ನು ವಶಪಡಿಸಿ ಕೊಂಡಿದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆಯ ವಾಸಿ ಮಣಿ (62) ಎಂಬವರ ಮನೆಯಲ್ಲಿ ಶೋಧ ನಡೆಸಿದಾಗ, ಬ್ಲಾಕ್ ಆ್ಯಂಡ್ ವೈಟ್ (26), 100 ಪೈಪರ್ (55), ಪೀಟರ್ ಸ್ಕಾಚ್ (15), ಬ್ಲೆಂಡರ್ ಪ್ರೈಡ್ಸ್ (13), ಎಂಸಿ ರಾಯ್ಸ್ (5) ಮದ್ಯದ 750 ಎಂ.ಎಲ್. ಬಾಟಲ್‍ಗಳನ್ನು ಅಕ್ರಮ ದಾಸ್ತಾನು ಮಾಡಲಾಗಿತ್ತು.

ಅಬಕಾರಿ ನಿಯಮಾವಳಿಗಳ ಪ್ರಕಾರ ಮನೆಯಲ್ಲಿ 3 ಲೀಟರ್ ಮದ್ಯವನ್ನು ಸಂಗ್ರಹಿಸಿಟ್ಟು ಕೊಳ್ಳಲು ಅವಕಾಶವಿದೆ, ಅದಕ್ಕಿಂತ ಹೆಚ್ಚಿನ ದಾಸ್ತಾನನ್ನು ಅಕ್ರಮವೆಂದು ಪರಿಗಣಿಸಲಾಗುತ್ತದೆ, ಈ ನಿಟ್ಟಿನಲ್ಲಿ ಪೊಲೀಸರು ದಾಳಿ ನಡೆಸಿದ್ದು ತನಿಖೆ ಮುಂದುವರಿಸಿದ್ದಾರೆ. ಈ ಬಗ್ಗೆ ಬಸವೇಶ್ವರನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.