ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ ನಕಲಿ ಮದ್ಯದ ಹಾವಳಿ

Social Share

#ಆರ್.ಟಿ.ವಿಠ್ಠಲಮೂರ್ತಿ
ಬೆಂಗಳೂರು, ಜ.18- ಸೆಕೆಂಡ್ಸ್  ಮದ್ಯದ ಹಾವಳಿ ತಡೆಗಟ್ಟಿ ದಶಕ ಕಳೆದರೂ ಇದೀಗ ಅದನ್ನು ಮೀರಿಸುವ ನಕಲಿ ಮದ್ಯದ ಜಾಲ ರಾಜ್ಯಾದ್ಯಂತ ವ್ಯವಸ್ಥಿತವಾಗಿ ಹಬ್ಬುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಪ್ರಭಾವಿಗಳೇ ಕಿಂಗ್ ಪಿನ್‍ಗಳಾಗಿ ಈ ನಕಲಿ ಮದ್ಯದ ಜಾಲವನ್ನು ನಡೆಸುತ್ತಿದ್ದು, ಮೊದಲ ಹಂತದಲ್ಲಿ ರಾಜ್ಯದ ಪ್ರಮುಖ ನಗರ ಪ್ರದೇಶಗಳನ್ನು ಈ ನಕಲಿ ಮದ್ಯ ಆವರಿಸುತ್ತಿದೆ.
ಅದರಲ್ಲೂ ದುಬಾರಿ ಬೆಲೆಯ ಮದ್ಯದ ಬ್ರಾಂಡ್‍ಗಳನ್ನು ನಕಲು ಮಾಡಲಾಗುತ್ತಿದ್ದು, ಇದು ಮಿಲ್ಟ್ರಿ ಕ್ಯಾಂಟೀನ್ ದಾಸ್ತಾನು ಎಂಬಂತೆ ಪ್ರತಿಬಿಂಬಿಸಿ ಮಾರಾಟ ಮಾಡಲಾಗುತ್ತಿದೆ. ಸಿಂಗಲ್ ಮಾಲ್ಟ್, ಬ್ಲಾಕ್ ಡಾಗ್, ಹಂಡ್ರೆಡ್ ಪೈಪರ್ಸ್, ಟೀಚರ್ಸ್ ವಿಸ್ಕಿಯಿಂದ ಹಿಡಿದು ಹಲವು ಪ್ರಮುಖ ಬ್ರಾಂಡ್ ಸೇರಿದಂತೆ ಹಲವು ಪ್ರಮುಖ ಬ್ರಾಂಡ್‍ಗಳ ಮದ್ಯ ನಕಲಿ ವೇಷ ಧರಿಸಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಈಗಾಗಲೇ ಸಹಜ ಮದ್ಯವೇ ರಾಜ್ಯದ ಹಳ್ಳಿ ಹಳ್ಳಿಗಳ ಬಹುತೇಕ ಕಿರಾಣಿ ಅಂಗಡಿಗಳಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾಲಕ್ಕೆ ನಕಲಿ ಮದ್ಯದ ಜಾಲ ವ್ಯವಸ್ಥಿತವಾಗಿ ಹಬ್ಬತ್ತಿದೆಯಾದರೂ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಎಂ.ಎಸ್.ಐ.ಎಲ್.ನಿಂದ ಹೋಲ್‍ಸೇಲ್ ಆಗಿ ವೈನ್‍ಸ್ಟೋರ್‍ಗಳಿಗೆ, ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಮಾರಾಟವಾಗುತ್ತಿದ್ದರೆ, ಇದೇ ಮದ್ಯದ ಹಲವು ಪಾಲು ಎಂಆರ್‍ಪಿ ಲೆಕ್ಕದಲ್ಲಿ ಹಳ್ಳಿಗಳ ಕಿರಾಣಿ ಅಂಗಡಿಗಳಿಗೆ ಸರಬರಾಜಾಗುತ್ತಿದೆ.
ಈ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಪಕ್ಷ ಭೇದ ಮರೆತು ಎಲ್ಲ ಪಕ್ಷಗಳ ಶಾಸಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರಲ್ಲದೆ ಹಳ್ಳಿಗಾಡಿನ ಯುವಸಮೂಹವನ್ನು ಸಂಪೂರ್ಣವಾಗಿ ದಿಕ್ಕು ತಪ್ಪಿಸುವ ಈ ಕೆಲಸದಿಂದ ರಾಜ್ಯದ ಮುಖ ಚಿತ್ರವೇ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದ್ದರು.
ಈ ಸಂದರ್ಭದಲ್ಲಿ ಉತ್ತರಿಸಿದ್ದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಈ ಪಿಡುಗಿಗೆ ತಡೆ ಹಾಕುವುದಾಗಿ ಭರವಸೆ ನೀಡಿದ್ದರಾದರೂ ಇದುವರೆಗೆ ಹಳ್ಳಿಗಾಡಿನ ಕಿರಾಣಿ ಅಂಗಡಿಗಳಲ್ಲಿ ಲಭ್ಯವಾಗುತ್ತಿರುವ ಮದ್ಯಕ್ಕೆ ಕಡಿವಾಣ ಬಿದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದೀಗ ನಕಲಿ ಮದ್ಯದ ಜಾಲವೂ ದೊಡ್ಡ ಮಟ್ಟದಲ್ಲಿ ಮೇಲೆದ್ದಿದ್ದು ಈ ಬೆಳವಣಿಗೆ ಆತಂಕ ಮೂಡಿಸಿದೆ.
ಒಂದು ಕಾಲದಲ್ಲಿ ಡಿಸ್ಟಿಲರಿಗಳಿಂದ ಸೆಕೆಂಡ್ಸ್  ಹಾಗೂ ಥರ್ಡ್ ಮದ್ಯ ಸರಬರಾಜಗುತ್ತಿದ್ದ ವಿಷಯ ರಾಜ್ಯದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ಡಿಸ್ಟಿಲರಿಗಳಲ್ಲಿ ಉತ್ಪಾದನೆಯಾಗುವ ಮದ್ಯದ ಪೈಕಿ ಒಂದು ಪಾಲು ತೆರಿಗೆ ಸಹಿತವಾಗಿ ಮಾರುಕಟ್ಟೆಗೆ ಬಂದರೆ ಇನ್ನೂ ದೊಡ್ಡ ಪಾಲು ತೆರಿಗೆ ರಹಿತವಾಗಿ ಸೆಕೆಂಡ್ಸ್  ಹಾಗೂ ಥq್ಸರ್ï ರೂಪದಲ್ಲಿ ಮಾರುಕಟ್ಟೆಗೆ ಬರುತ್ತಿದೆ ಎಂಬ ದೂರು ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಇದು ಸಾಧ್ಯವಾಗಿರುವುದರಿಂದಲೇ ಮದ್ಯದ ಲಾಬಿ ಬಲಿಷ್ಟವಾಗಿದ್ದು, ಆಳುವ ಸರ್ಕಾರಗಳನ್ನೇ ನಡುಗಿಸುವ ಮಟ್ಟಕ್ಕೆ ಬೆಳೆದಿದೆ ಎಂಬ ಕೂಗೆದ್ದಿತ್ತು. ಇಂತಹ ಕೂಗಿನ ಹಿನ್ನೆಲೆಯಲ್ಲಿ 1989ರಲ್ಲಿ ಅಧಿಕಾರಕ್ಕೆ ಬಂದ ವೀರೇಂದ್ರಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮದ್ಯದ ಲಾಬಿಯ ವಿರುದ್ಧ ಮುಗಿಬಿದ್ದಿತ್ತಾದರೂ ಇದರ ಫಲಶೃತಿಯಾಗಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರೇ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂಬ ಕೂಗು ಕೇಳಿ ಬಂತು.
ಆದರೆ, 1999ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದ ಎಸ್.ಎಂ.ಕೃಷ್ಣ ಅವರು ಪಾನೀಯ ನಿಗಮವನ್ನು ಸ್ಥಾಪಿಸಿದ್ದಲ್ಲದೆ ರಾಜ್ಯದ ಡಿಸ್ಟಿಲರಿಗಳಲ್ಲಿ ಉತ್ಪಾದನೆ ಯಾಗುವ ಎಲ್ಲ ಮದ್ಯವನ್ನು ಪಾನೀಯ ನಿಗಮಕ್ಕೆ ಪೂರೈಸಬೇಕು ಮತ್ತು ಇದಕ್ಕೆ ಪ್ರತಿಯಾಗಿ ಹಣ ಪಡೆಯ ಬೇಕು ಎಂಬ ಷರತ್ತು ಜಾರಿಯಾಗುವ ಹಾಗೆ ನೋಡಿಕೊಂಡರು.
ಇದರಿಂದಾಗಿ ಮದ್ಯದ ಲಾಬಿ ಸಂಪೂರ್ಣ ಮಗುಚಿ ಬಿದ್ದಿತ್ತಲ್ಲದೆ ಸೆಕೆಂಡ್ಸ್  ಹಾಗೂ ಥರ್ಡ್ ಮದ್ಯಕ್ಕೆ ಕಡಿವಾಣ ಬಿದ್ದು ಈ ಬಾಬ್ತಿನ ವಿಷಯದಲ್ಲಿ ಅಪಾರ ಪ್ರಮಾಣದ ಆದಾಯ ಸರ್ಕಾರದ ಬೊಕ್ಕಸಕ್ಕೆ ಹರಿದು ಬರುವಂತೆ ಆಯಿತು. ಆದರೆ ಇದೀಗ ಇದ್ದಕ್ಕಿದ್ದಂತೆ ರಾಜ್ಯದ ಪ್ರಮುಖ ನಗರ ಪ್ರದೇಶಗಳಲ್ಲಿ ನಕಲಿ ಮದ್ಯದ ಜಾಲ ಆರಂಭವಾಗಿದ್ದು,ಇದು ಸರ್ಕಾರದ ಆದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಕನ್ನ ಹಾಕುವುದು ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಎಚ್ಚೆತ್ತು ನಕಲಿ ಮದ್ಯದ ಜಾಲವನ್ನು ಸದೆಬಡಿಯದಿದ್ದರೆ ಮುಂದಿನ ದಿನಗಳಲ್ಲಿ ಅದು ಕೂಡಾ ಆಳುವವರ ಪಾಲಿಗೆ ದೊಡ್ಡ ತಲೆನೋವಾಗಿ ಕಾಡುವುದು ಖಚಿತ.

Articles You Might Like

Share This Article