ನ್ಯಾಯಾಲಯಗಳ ಪಾರದರ್ಶಕತೆಗೆ ಲೈವ್ ಸ್ಟ್ರೀಮ್ ವಿಚಾರಣೆ ಸಹಕಾರಿ : ವಕೀಲರ ಸಂಘ

ಬೆಂಗಳೂರು, ಜೂ.2- ರಾಜ್ಯ ಹೈಕೋರ್ಟ್ ನಲ್ಲಿ ಪ್ರಕರಣಗಳ ವಿಚಾರಣೆಯನ್ನು ಲೈವ್ ಸ್ಟ್ರೀಮ್ ಪ್ರಾರಂಭಿಸಿರುವುದನ್ನು ಬೆಂಗಳೂರು ವಕೀಲರ ಸಂಘ ಸ್ವಾಗತಿಸಿದೆ. ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ಪೀಠದಿಂದ ಲೈವ್ ಸ್ಟ್ರೀಮ್ ವಿಚಾರಣೆ ಆರಂಭಿಸಿರುವುದನ್ನು ಸ್ವಾಗತಿಸುವುದಾಗಿ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟಿನಲ್ಲಿನ ನ್ಯಾಯಾಲಯಗಳ ಪ್ರಕರಣಗಳ ವಿಚಾರಣೆಯನ್ನು ಲೈವ್ ಸ್ಟ್ರೀಮ್ ಮೂಲಕ ನಡೆಸಲು ಸುಪ್ರೀಂ ಕೋರ್ಟ್ ತೀರ್ಮಾನ ಕೈಗೊಂಡಿದೆ. ಇಡೀ ದೇಶದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿ ಎಂದು ಅವರು ಹೇಳಿದ್ದಾರೆ.

ನ್ಯಾಯಾಲಯಗಳಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಇರಬೇಕೆಂಬ ಧ್ಯೇಯದೊಂದಿಗೆ ವಕೀಲರು ಹಾಗೂ ಜನ ಸಾಮಾನ್ಯರ ಬಹುದಿನಗಳ ಬೇಡಿಕೆ ಇದಾಗಿತ್ತು. ಬೆಂಗಳೂರು ವಕೀಲರ ಸಂಘವು ಈ ಬೇಡಿಕೆಗಾಗಿ ಒತ್ತಾಯಿಸುತ್ತಾ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ದಂತಹ ಅಪವಾದಗಳು ಮುಕ್ತವಾಗಲು, ಗುಣಾತ್ಮಕವಾದ ತೀರ್ಪುಗಳು ಹೊರಬರಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ವಕೀಲರು ಮತ್ತು ಕಕ್ಷಿದಾರರಿಗೂ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.