ಬೆಂಗಳೂರು,ಫೆ.28- ಒಂದು ಕಡೆ ಬೇಸಿಗೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವ ಪರಿಣಾಮ ರಾಜ್ಯದಲ್ಲಿ ಮತ್ತೆ ಲೋಡ್ ಶೆಡ್ಡಿಂಗ್ ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲೋಡ್‍ಶೆಡ್ಡಿಂಗ್‍ಗೆ ಕೈ ಹಾಕಿಲ್ಲ. ಆದರೆ, ಮುಂದಿನ ದಿನಗಳಲ್ಲಿ ರಾಜ್ಯಕತ್ತಲೆಯಲ್ಲಿ ಮುಳುಗುವುದು ಬಹುತೇಕ ಖಚಿತವಾಗಿದೆ.ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಲೋಡ್‍ಶೆಡ್ಡಿಂಗ್ ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆಯಲ್ಲಿದೆ.
ಎಲ್ಲಾ ಮೂಲಗಳಿಂದ ಸದ್ಯ 5500 ಮೆ.ವ್ಯಾ.ವರೆಗೂ ವಿದ್ಯುತ್ ಲಭ್ಯವಾಗುತ್ತಿದೆ. ಎಲ್ಲ ಉಷ್ಣ ವಿದ್ಯುತ್ ಸ್ಥಾವರಗಳೂ ಚೆನ್ನಾಗಿರುವವರೆಗೂ ಪರಿಸ್ಥಿತಿ ನಿಭಾಯಿಸಬಹುದಾಗಿದೆ. ಆದರೆ ದಿಢೀರ್ ದುರಸ್ತಿಗೆ ಒಳಗಾಗುವ ಉಷ್ಣ ವಿದ್ಯುತ್ ಸ್ಥಾವರಗಳು ತಾಂತ್ರಿಕ ಕಾರಣಗಳಿಗೆ ಕೈಕೊಟ್ಟರೆ ಸಮಸ್ಯೆ ತೀವ್ರವಾಗಿ ರಾಜ್ಯದಲ್ಲಿ ಕತ್ತಲು ಕವಿಯಲಿದೆ.
ಈ ಮಧ್ಯೆ ಅಲ್ಪ ಪ್ರಮಾಣದಲ್ಲಿ ನಡೆಯುತ್ತಿದ್ದ ಜಲ ವಿದ್ಯುತ್ ಉತ್ಪಾದನೆ ಸ್ಥಗಿತವಾಗಬಹುದು. ಇದರಿಂದ ಲೋಡ್ ಶೆಡ್ಡಿಂಗ್ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯದ ಒಟ್ಟಾರೆ ವಿದ್ಯುತ್ ಬೇಡಿಕೆ 7,193 ಮೆಗಾವ್ಯಾಟ್ ಇದೆ.
ಶಾಖೋತ್ಪನ್ನ, ಪವನ, ಜಲ ವಿದ್ಯುತ್, ನವೀಕೃತ ಇಂಧನ ಸೇರಿ ವಿವಿಧ ಮೂಲಗಳಿಂದ 4,136 ಮೆ.ವಾ ಮಾತ್ರ ಉತ್ಪಾದನೆ ಆಗುತ್ತಿದೆ. ಕೇಂದ್ರ ಸರ್ಕಾರದಿಂದ ಸರಾಸರಿ 2,200 ಮೆ.ವಾ. ಪೂರೈಕೆ ಆಗುತ್ತಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿ 700ರಿಂದ 800 ಮೆ.ವಾ. ವ್ಯತ್ಯಾಸ ಇದೆ.
ನಿರಂತರ ಜ್ಯೋತಿ ಯೋಜನೆಯಡಿ ಬರುವ ಗ್ರಾಮಗಳಲ್ಲಿ ದಿನದ 24 ಗಂಟೆ ವಿದ್ಯುತ್ ಪೂರೈಕೆ ಇದೆ. ಆದರೆ, ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ ಎಂಬುದನ್ನು ಇಂಧನ ಇಲಾಖೆ ಅಕಾರಿಗಳು ಒಪ್ಪುವುದಿಲ್ಲ. ಪ್ರಸರಣ ವ್ಯವಸ್ಥೆ, ಸ್ಥಳೀಯ ಸಮಸ್ಯೆಗಳಿಂದ ಸರಬರಾಜಿನಲ್ಲಿ ವ್ಯತ್ಯಯವಾಗಿದೆ ಎಂಬ ಸಬೂಬು ಹೇಳುತ್ತಿದ್ದಾರೆ.
ಆರ್‍ಟಿಪಿಎಸ್(ರಾಯಚೂರು ವಿದ್ಯುತ್ ಶಾಖೋತ್ಪನ್ನ ಕೇಂದ್ರ)ನ ನಾಲ್ಕು ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ. ಒಟ್ಟು 8 ಘಟಕಗಳಿಂದ 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು, ಕಲ್ಲಿದ್ದಲ್ಲು ಸಮಸ್ಯೆಯಿಂದಾಗಿ ಅನೇಕ ಘಟಕಗಳು ಸ್ಥಗಿತಗೊಂಡಿವೆ ಎಂದು ತಿಳಿದುಬಂದಿದೆ.
ಇನ್ನುಳಿದ ಘಟಕಗಳಿಂದ 630 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆರ್‍ಟಿಪಿಎಸ್‍ನಲ್ಲಿರುವ 8 ವಿದ್ಯುತ್ ಘಟಕಗಳು ವಿದ್ಯುತ್ ಉತ್ಪಾದನೆ ಮಾಡಬೇಕಾದರೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕಾಗುತ್ತದೆ.
ಬೇಡಿಕೆಯಂತೆ ಕಲ್ಲಿದ್ದಲು ಪೂರೈಕೆಯಾಗದೇ ಮಹಾರಾಷ್ಟ್ರ ಸಿಂಗರೇಣಿಯ ಕೂಲ್ ಮೈನಿಂಗ್‍ನಿಂದ ಎರಡು ರೇಕ್(3,200ರಿಂದ 3,600 ಟನ್), ನಾಗಪುರದಿಂದ ಒಂದು ರೇಕ್ ಸೇರಿದಂತೆ 3-4 ರೇಕ್‍ಗಳು ಸರಬರಾಜು ಆಗುತ್ತಿದ್ದು, ಇದರಿಂದ 4 ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಬೆಂಗಳೂರಿಗೆ ಪ್ರತಿದಿನ 103 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಬೇಕು. ನಾವು 70 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಇದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ 6 ಗಂಟೆ ತ್ರಿಫೇಸ್ ವಿದ್ಯುತ್ ಒದಗಿಸುತ್ತಿದ್ದೇವೆ. ದಿನದಿಂದ ದಿನಕ್ಕೆ ಬಳಕೆದಾರರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಲೋಡ್‍ಶೆಡ್ಡಿಂಗ್ ಅನಿವಾರ್ಯವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಾಮಥ್ರ್ಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಆದರೂ ಗ್ರಾಹಕರು ಮತ್ತು ರೈತರಿಗೆ ತೊಂದರೆಯಾಗದಂತೆ ನಾವು ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಪ್ರತಿದಿನ ರಾಜ್ಯಾದ್ಯಂತ 221.27 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಲಾಗಿದೆ. ಪರೀಕ್ಷೆ ಮುಗಿದ ಬಳಿಕ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಬಹುದು ಎಂಬ ಸುಳಿವು ನೀಡಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ರೈತರಿಗೆ 6 ಗಂಟೆ ತ್ರಿಫೇಸ್ ವಿದ್ಯುತ್ ನೀಡಿದರೆ ವಾಣಿಜ್ಯ ಹಾಗೂ ತರಕಾರಿ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು. ಯಾವ ಭಾಗದಲ್ಲಿ ಟಿಸಿಗಳು ದುರಸ್ತಿಗೆ ಒಳಗಾಗಿರುತ್ತವೋ ಅಂತಹ ಕಡೆ ತಕ್ಷಣವೇ ರಿಪೇರಿ ಮಾಡುವುದು, ದಿನದ 24 ಗಂಟೆ ವಿದ್ಯುತ್ ಕೇಂದ್ರಗಳು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
# ಜಲಾಶಯಗಳಲ್ಲಿ ಕಡಿಮೆಯಾದ ನೀರು :
ಜಲ ವಿದ್ಯುತ್ ಸ್ಥಾವರಗಳಲ್ಲಿ ಸದ್ಯ ಉತ್ಪಾದನೆ ಕಡಿಮೆಗೊಳಿಸಲಾಗಿದ್ದು, ಮುಂದಿನ ಬೇಸಿಗೆಯಲ್ಲಿ ಉಂಟಾಗುವ ಕ್ಷಾಮ ನಿಭಾಯಿಸಲು ಕಾಯ್ದಿರಿಸಲಾಗಿದೆ. ಆದರೂ ತೀರಾ ತುರ್ತು ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಅಂದರೆ ಸಾಮಾನ್ಯ ಸಂದರ್ಭದಲ್ಲಿ 1700 ಮೆ. ವ್ಯಾ. ವರೆಗೂ ಉತ್ಪಾದಿಸುವ ಜಲವಿದ್ಯುತ್‍ನ್ನು ಈಗ ಬರೀ 300 ಮೆ.ವ್ಯಾ.ಗೆ ಸೀಮಿತಗೊಳಿಸಲಾಗಿದೆ. ಜಲವಿದ್ಯುತ್ ಸ್ಥಾವರಗಳಿರುವ ಶರಾವತಿ, ವರಾಹಿ, ಸೂಪಾ ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಶೇ.37ರಷ್ಟು ಮಾತ್ರ ಇದೆ.
ಇನ್ನುಳಿದ ಘಟಕಗಳು ಕಾರ್ಯ ನಿರ್ವಹಿಸಲು ಕಲ್ಲಿದ್ದಲ್ಲು ಸಮಸ್ಯೆ ತಲೆದೋರಿದೆ. ಒಂದು ವೇಳೆ ಈ ಪೂರೈಕೆಯೂ ಸ್ಥಗಿತವಾದರೆ ವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಲೋಡ್‍ಶೆಡ್ಡಿಂಗ್ ಸಮಸ್ಯೆ ಎದುರಿಸಬೇಕಾಗುತ್ತದೆ. ಸೌರ ಹಾಗೂ ಪವನ ವಿದ್ಯುತ್ ಶಕ್ತಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ ಹವಾಮಾನದಲ್ಲಿನ ಬದಲಾವಣೆಯಿಂದಾಗಿ ನಿರೀಕ್ಷೆಯಂತೆ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ.
