ಬೆಂಗಳೂರು, ಜ.15- ರಾಷ್ಟ್ರೀಯ ಹೆದ್ದಾರಿ-4ರ ತುಮಕೂರು ರಸ್ತೆ ಮೇಲ್ಸೇತುವೆ ಕಳಪೆ ಕಾಮಗಾರಿಯಿಂದ ಆಗಿದ್ದು, ಭಾರೀ ವಾಹನ ಸಂಚಾರಕ್ಕೆ ಯೋಗ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಜೆಡಿಎಸ್ ಶಾಸಕ ಆರ್. ಮಂಜುನಾಥ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಭಾರೀ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ ಹೊಸದಾಗಿ ಮೇಲ್ಸೇತುವೆ ಮಾಡಬೇಕಾಗಿದೆ. ಈ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು.
ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು. ಈ ಬಗ್ಗೆ ಒಂದು ವಾರದಲ್ಲಿ ತೀರ್ಮಾನಿಸುತ್ತಾರೆ. ಲೋಡ್ ಟೆಸ್ಟಿಂಗ್‍ನಲ್ಲಿ ಅನುಮತಿ ಸಿಕ್ಕರೆ ಎರಡು-ಮೂರು ದಿನಗಳಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನದೇ ಆದ ಸುರಕ್ಷತಾ ನಿಯಮ ಹೊಂದಿದೆ. ಸಮರ್ಪಕವಾಗಿ ಗುಣಮಟ್ಟ ನಿರ್ವಹಣೆ ಮಾಡಬೇಕಿದೆ. ತುಮಕೂರು ರಸ್ತೆ ಮೇಲ್ಸೇತುವೆ ಕಾಮಗಾರಿ ಕಳಪೆಯಾಗಿದೆ. ಅದರ ರಿಪೇರಿಗೆ ಕ್ರಮ ಕೈಗೊಂಡಿದೆ. ಲೋಡ್ ಟೆಸ್ಟಿಂಗ್ ಸಹ ಆಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯಿಂದಲೂ ಪರೀಕ್ಷಿಸಲಾಗಿದೆ. ಲೋಡ್ ಪರೀಕ್ಷೆ ಸಂದರ್ಭದಲ್ಲಿ ಕೇಬಲ್ ಬಾಗುತ್ತಿರುವುದು ಕಂಡುಬಂದಿದೆ. ಪಿಲ್ಲರ್‍ಗಳನ್ನು ದುರಸ್ತಿ ಮಾಡಿದರೂ ಸುರಕ್ಷಿತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದಕ್ಕೂ ಮುನ್ನ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸಕ ಮಂಜುನಾಥ್ ಪ್ರಸ್ತಾಪಿಸಿರುವ ವಿಷಯ ಗಂಭೀರವಾಗಿದ್ದು, ತುಮಕೂರು ರಸ್ತೆಯ ಮೇಲ್ಸೇತುವೆ ಹಾನಿಯಾಗಿದೆ, ದುರಸ್ತಿಯಾಗುತ್ತಿದೆ. ಸರ್ಕಾರ ದೃಢ ನಿಲುವು ತಳೆಯಬೇಕಾಗುತ್ತದೆ. ಇಲ್ಲದಿದ್ದರೆ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತದೆ ಎಂದರು.
ವಿಷಯ ಪ್ರಸ್ತಾಪಿಸಿದ ಶಾಸಕ ಮಂಜುನಾಥ್ ತುಮಕೂರು ರಸ್ತೆ ಮೇಲ್ಸೇತುವೆ ಪಿಲ್ಲರ್ 102 ಮತ್ತು 103ರಲ್ಲಿ ತಾಂತ್ರಿಕ ದೋಷ ಉಂಟಾಗಿ ಎರಡು ತಿಂಗಳಿನಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೆಂಗಳೂರು, ಬೀದರ್, ಮಂಗಳೂರು ಸೇರಿದಂತೆ 20 ಜಿಲ್ಲೆಗಳ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.
ಸೇತುವೆ ಇಲ್ಲದ ಪರಿಣಾಮ 2, 3ಕಿ.ಮೀ.ಗಳಷ್ಟು ಉದ್ದ ವಾಹನಗಳು ಗಂಟೆಗಟ್ಟಲೆ ನಿಲ್ಲುತ್ತವೆ. ಆಂಬುಲೆನ್ಸ್ ಸಹ ರಸ್ತೆಯಲ್ಲಿ ಹೋಗಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೋಲ್ ಸಂಗ್ರಹ ನಿಲ್ಲಿಸಬೇಕು. ಲಕ್ಷಾಂತರ ಜನರು ಪ್ರಯಾಣಿಕರಿದ್ದು, ಲಘು ವಾಹನ, ಆಂಬುಲೆನ್ಸ್‍ಗಳನ್ನೂ ಸೇತುವೆ ಮೇಲೆ ಬಿಡುತ್ತಿಲ್ಲ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಅಕಾರಿಗಳಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
