ವಿಧಾನಸಭೆಗೆ ಸ್ಪರ್ಧಿಸಲು ಲೋಕಸಭೆ ಮಾಜಿ ಸದಸ್ಯರ ಭರ್ಜರಿ ಲಾಬಿ

Social Share

ಬೆಂಗಳೂರು, ಡಿ.17- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜ್ಯ ರಾಜಕಾರಣದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಹತ್ತಾರು ಹಾಲಿ ಮತ್ತು ಮಾಜಿ ಲೋಕಸಭೆ ಸದಸ್ಯರು ಟಿಕೆಟ್ ಪಡೆಯಲು ಲಾಬಿ ನಡೆಸತೊಡಗಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸೋತವರು ಲೋಕಸಭೆ ಚುನಾವಣೆಗೆ ಸ್ರ್ಪಸುವುದು ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತವರು ಮತ್ತೆ ವಿಧಾನಸಭೆ ಎಲೆಕ್ಷನ್ಗೆ ನಿಲ್ಲುವುದು ರಾಜ್ಯ ರಾಜಕೀಯದಲ್ಲಿ ಹಾಸುಹೊಕ್ಕಾಗಿದೆ. ಅದರಂತೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಸಂಸದರು ಮತ್ತು ಚುನಾವಣೆಯಲ್ಲಿ ಸೋತ ಮಾಜಿ ಸಂಸದರು ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಟಿಕೆಟ್ಗಾಗಿ ಪಕ್ಷದ ವೇದಿಕೆಗಳಲ್ಲಿ ಅಪೇಕ್ಷೆ ವ.ಕಪಡಿಸುತಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಂತೂ ನಾಲ್ವರು ಮಾಜಿ ಲೋಕಸಭೆ ಸದಸ್ಯರು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿ ವಿಧಾನಸಭೆ ಚುನಾವಣೆಗೆ ಸ್ರ್ಪಸುವ ಇಂಗಿತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಯುಪಿಎ ಸರಕಾರದಲ್ಲಿ ಸಚಿವರಾಗಿ ಏಳು ಬಾರಿ ಲೋಕಸಭೆ ಸದಸ್ಯರಾಗಿ ಚುನಾಯಿತರಾಗಿದ್ದ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೇಳಿದವರಲ್ಲಿ ಪ್ರಮುಖರಾಗಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಚಾಮರಾಜನಗರ ಮಾಜಿ ಸಂಸದ ಆರ್.ಧೃವನಾರಾಯಣ್, ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ ಮತ್ತು ರಾಯಚೂರು ಮಾಜಿ ಸಂಸದ ಬಿ.ವಿ.ನಾಯಕ್ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧೆಮಾಡಲು ಉತ್ಸುಕರಾಗಿದ್ದು, ತಮಗೆ ಟಿಕೆಟ್ ನೀಡುವಂತೆ ಕೆಪಿಸಿಸಿಗೆ ಲಕ್ಷಾಂತರ ರೂಪಾಯಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕ್ಕೆ ಬಂದರೆ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಅಥವಾ ಪ್ರಭಾವಿ ಸಚಿವರಾಗುವ ಉದ್ದೇಶದಿಂದ ಮುನಿಯಪ್ಪನವರು ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಅಭಿಲಾಷೆ ಹೊಂದಿದ್ದಾರೆನ್ನಲಾಗಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನ ಮಣಿಸಿ ಅಧಿಕಾರ ಕ್ಕೆ ಬರುವುದು ಕಷ್ಟಕರ ಎನ್ನುವ ರಾಜಕೀಯ ಲೆಕ್ಕಾಚಾರದ ಹಿನ್ನೆಯಲ್ಲಿ ವಿದಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಪಕ್ಷದ ಟಿಕೆಟ್ಗಾಗಿ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ಕಾಂಗ್ರೆಸ್ ಮುಖಂಡರಲ್ಲಿ ಒತ್ತಡ ಹೇರುತ್ತಿದ್ದಾರೆನ್ನಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸ್ವಂತ ಬಲದಲ್ಲಿ ಅಧಿಕಾರ ಕ್ಕೆ ಬರಲು ವಿಫಲವಾದರೆ ಜೆಡಿಎಸ್ ನೆರವಿನಿಂದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗುವ ಲೆಕ್ಕಾಚಾರವನ್ನೂ ಮುನಿಯಪ್ಪನವರು ಹೊಂದಿದ್ದಾರೆನ್ನಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಜತೆ ಉತ್ತಮ ಬಾಂಧವ್ಯವನ್ನು ಮುನಿಯಪ್ಪನವರು ಇಟ್ಟುಕೊಂಡಿದ್ದು ಅತಂತ್ರ ವಿಧಾನಸಭೆ ರಚನೆಯಾದರೆ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗುವ ದೂರದ ಆಲೋಚನೆ ಟಿಕೆಟ್ ನಿರೀಕ್ಷೆ ಹಿಂದೆ ಇದೆ ಎನ್ನಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧದ ಮುನಿಸಿನಿಂದ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರಿ ಶಾಸಕರಾಗಿ ಆಯ್ಕೆಯಾದ ಮಾಜಿ ಸಂಸದ ಹೆಚ್ ವಿಶ್ವನಾಥ್ ಅವರು ಆಪರೇಶನ್ ಕಮಲದಲ್ಲಿ ಬಿಜೆಪಿ ಸೇರಿ ಈಗ ಮತ್ತೆ ತವರು ಮನೆ ಕಾಂಗ್ರೆಸ್ಗೆ ಮರಳಲು ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಅವಕಾಶ ನೀಡಿದರೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ಆಲೋಚನೆಯನ್ನೂ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಈ ಕಾರಣದಿಂದಲೇ ಇತ್ತೀಚೆಗೆ ಬಿಜೆಪಿಯಲ್ಲಿದ್ದರೂ ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೊಮ್ಮಾಯಿ ಸರ್ಕಾರದ ಮೇಲೆ ಮತ್ತೊಂದು ಬಾಂಬ್ ಸಿಡಿಸಿದ ಸಿದ್ದರಾಮಯ್ಯ..!

ಬಿಜೆಪಿಯಲ್ಲಿ ಯಾರ್ಯಾರು..? ಭಾರತೀಯ ಜನತಾಪಕ್ಷದಲ್ಲಿ ಹಲವಾರು ಸಂಸದರುಗಳು ಕೇಂದ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಶಿಫ್ಟ್ ಆಗಲು ಆಸಕ್ತಿ ಹೊಂದಿದ್ದಾರೆ. ಕೇಂದ್ರ ಕೃಷಿ ಸಚಿವರಾಗಿರುವ ಚಿಕ್ಕಮಗಳೂರು – ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಹಾವೇರಿ – ಗದಗ ಕ್ಷೇತ್ರದ ಹಿರಿಯ ಸಂಸದರಾಗಿರುವ ಶಿವಕುಮಾರ ಉದಾಸಿ, ಮಾಜಿ ಕೇಂದ್ರ ಸಚಿವರಾದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್, ಕೇಂದ್ರ ಸಚಿವರಾದ ಚಿತ್ರದುರ್ಗದ ಸಂಸದ ಆನೇಕಲ್ನ ಎ.ನಾರಾಯಣಸ್ವಾಮಿ, ಮಾಜಿ ಕೇಂದ್ರ ಸಚಿವರಾದ ಉತ್ತರ ಕನ್ನಡ ಸಂಸದ ಅನಂತ್ಕುಮಾರ ಹೆಗಡೆ, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಸೇರಿದಂತೆ ಹಲವಾರು ಸಂಸದರು ಪಕ್ಷ ಅವಕಾಶ ನೀಡಿದರೆ ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಆಸೆ ಇಟ್ಟುಕೊಂಡಿದ್ದಾರೆಂದು ತಿಳಿದುಬಂದಿದೆ.

ಬಿಜೆಪಿಯ ಲೋಕಸಭೆ ಸದಸ್ಯರಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸಾಮಾಜಿಕ ನ್ಯಾಯ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಈ ಹಿಂದೆ ರಾಜ್ಯದ ವಿಧಾನಸಭೆ ಶಾಸಕರಾಗಿದ್ದವರು. ಸದಾನಂದಗೌಡರು ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದವರು, ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಲೋಕಸಭೆ ಚುನಾವಣೆಗೆ ಸ್ರ್ಪಸಿ ಅಲ್ಲಿ ಗೆಲವು ಕಂಡಿದ್ದಾರೆ.

# ಬಿಜೆಪಿ ಅನುಮತಿ ಅನುಮಾನ:
ಭಾರತೀಯ ಜನತಾ ಪಕ್ಷದಲ್ಲಿ ಹತ್ತಕ್ಕೂ ಹೆಚ್ಚು ಲೋಕಸಭೆ ಸದಸ್ಯರು ಪಾರ್ಲಿಮೆಂಟ್ ಬದಲು ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಬಿಜೆಪಿ ಹೈಕಮಾಂಡ್ ಅನುಮತಿ ನೀಡುವುದು ಅನುಮಾನವಾಗಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವರಾಗಿದ್ದ ಅನಂತ್ಕುಮಾರ್ ಹೆಗಡೆ, ಸಂಸದರಾದ ಪಿ.ಸಿ.ಮೋಹನ್, ಕರಡಿ ಸಂಗಣ್ಣ, ಗದ್ದಿಗೌಡರ್ ಸೇರಿದಂತೆ ಹಲವರು ವಿಧಾನಸಭೆ ಚುನಾವಣೆ ಟಿಕೆಟ್ ಕೇಳಿದ್ದರೂ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಯೂ ಬಿಜೆಪಿಯು ಲೋಕಸಭೆ ಸದಸ್ಯರಿಗೆ ವಿಧಾನಸಭೆಗೆ ಸ್ಪರ್ಧೆ ಮಾಡಲು ಅವಕಾಶ ನೀಡುವ ಮನಸ್ಥಿತಿಯಲ್ಲಿ ಇಲ್ಲ. ಒಂದು ವೇಳೆ ತನ್ನದೇ ಆದ ರಾಜಕೀಯ ಕಾರಣಕ್ಕೆ ಟಿಕೆಟ್ ಕಲ್ಪಿಸಿದರೆ ಒಂದಿಬ್ಬರು ಲೋಕಸಭೆ ಸದಸ್ಯರಿಗೆ ಒಪ್ಪಿಗೆ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

Articles You Might Like

Share This Article