ಕೊರೊನಾ, ಓಮಿಕ್ರಾನ್ ಹೆಚ್ಚಳವಾದರೆ ಲಾಕ್‍ಡೌನ್ ಅನಿವಾರ್ಯ: ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು

Social Share

ಬೆಂಗಳೂರು,ಜ.2- ರಾಜ್ಯದಲ್ಲಿ ಮೂರನೇ ಅಲೆ ಬರುವ ಸಾಧ್ಯತೆಯಿದ್ದು, ಒಂದು ವೇಳೆ ಕೋವಿಡ್ ಪ್ರಕರಣಗಳು ಹೆಚ್ಚಳವಾದರೆ ಸೆಮಿ ಲಾಕ್‍ಡೌನ್ ಇಲ್ಲವೇ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ್ದು, ಶೇ.5ಕ್ಕಿಂತ ಪಾಸಿಟಿವ್ ದರ ಹೆಚ್ಚಾದರೆ ಅನಿವಾರ್ಯವಾಗಿ ಲಾಕ್‍ಡೌನ್ ಮಾಡಬೇಕೆಂದು ಸಲಹೆ ಮಾಡಿದೆ.
ಕಳೆದ ಒಂದು ವಾರದಿಂದ ದೇಶದ ಪ್ರಮುಖ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಕರ್ನಾಟಕದಲ್ಲೂ ಮೂರು ದಿನದಿಂದ ಪ್ರಕರಣಗಳು ಏರುಮುಖವಾಗುತ್ತಿದ್ದು. ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಹಾಗೂ ಶೇ.40ಕ್ಕಿಂತ ಹೆಚ್ಚು ಐಸಿಯು ಬೆಡ್ ರೋಗಿಗಳ ಸಂಖ್ಯೆ ಹೆಚ್ಚಳವಾದರೆ ಲಾಕ್‍ಡೌನ್ ಮಾಡಲೇಬೇಕೆಂದು ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.
ರಾಜ್ಯ ಸರ್ಕಾರ ತಕ್ಷಣವೇ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕದೊಂಡು ಕೋವಿಡ್ ನಿಯಂತ್ರಿಸಲು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಇದನ್ನು ತಡೆಯದಿದ್ದರೆ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈಗ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತಾಂತ್ರಿಕ ಸಲಹಾ ಸಮಿತಿ ಮಹಾರಾಷ್ಟ್ರ, ಕೇರಳ, ತಮಿಳುನಾಡು ಹಾಗೂ ವಿದೇಶದಿಂದ ಬರುವವರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಆದರೆ ಹೊರ ರಾಜ್ಯದಿಂದ ಬರುತ್ತಿರುವವರ ಮೇಲೆ ನಿಗಾವಹಿಸುತ್ತಿಲ್ಲ ಎಂದು ಸಮಿತಿ ಹೇಳಿದೆ.
ಮಾರುಕಟ್ಟೆ, ಸಿನಿಮಾ ಮಂದಿರಗಳು, ಆಡಿಟೋರಿಯಂ, ಶಾಲೆಗಳು, ಕಾಲೇಜುಗಳು, ಪಬ್, ಬಾರ್, ರೆಸ್ಟೋರೆಂಟ್, ಕಾರ್ಖಾನೆ, ಸಾರ್ವಜನಿಕ ಸಾರಿಗೆ, ಕ್ಷೌರದಂಗಡಿ, ಈಜುಕೊಳ, ಜಿಮ್‍ಗಳು, ಕ್ರೀಡಾಂಗಣಗಳು, ಮದುವೆ ಸಮಾರಂಭ, ಛತ್ರ, ಉದ್ಯಾನವನಗಳು, ಮೆಟ್ರೋ ರೈಲು ಸೇರಿದಂತೆ ಮತ್ತಿತರ ಕಡೆ ಶೇ.50ರಷ್ಟಕ್ಕೆ ಮಾತ್ರ ಅವಕಾಶ ಕೊಡಬೇಕೆಂದು ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ.
ಪ್ರಮುಖವಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆಗಳು, ಮಾಲ್‍ಗಳು ಸೇರಿದಂತೆ ಮತ್ತಿತರ ಕಡೆ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಜನಸಂದಣಿಯಾಗದಂತೆ ಕ್ರಮ ವಹಿಸಬೇಕು. ಅನಿವಾರ್ಯವಾದರೂ ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲೇಬೇಕೆಂದು ಸೂಚಿಸಿದೆ.
ಸಿಎಂ ಸಭೆ: ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಬೊಮ್ಮಾಯಿ, ತಾಂತ್ರಿಕ ಸಲಹಾ ಸಮಿತಿಯಿಂದ ಅಭಿಪ್ರಾಯ ಪಡೆದಿದ್ದಾರೆ. ಮೂಲಗಳ ಪ್ರಕಾರ ಜ.7ರೊಳಗೆ ಉನ್ನತ ಮಟ್ಟದ ತಾಂತ್ರಿಕ ಸಲಹಾ ಸಮಿತಿ, ಸಚಿವರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲವು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಆರ್.ಅಶೋಕ್, ರಾಜ್ಯದಲ್ಲಿ 3ನೇ ಅಲೆ ಬರುವ ಸಂಭವವಿದೆ. ನಾವು ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಜ.7ಕ್ಕೂ ಮುನ್ನವೇ ಸಿಎಂ ಸಭೆ ಕರೆಯಲಿದ್ದಾರೆ. ಹೊಸ ಕಠಿಣ ನಿಯಮಗಳನ್ನು ಜಾರಿ ಮಾಡುವ ಸುಳಿವು ನೀಡಿದ್ದಾರೆ.
ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಎಲ್ಲರ ಜತೆ ಚರ್ಚಿಸಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

Articles You Might Like

Share This Article