ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ದಾಖಲೆ ಮುರಿಯಲು ಬಿಜೆಪಿ ಮಾಸ್ಟರ್ ಪ್ಲಾನ್

Social Share

ನವದೆಹಲಿ, ಅ.17- ಮುಂದಿನ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ಕಾಂಗ್ರೆಸ್ ದಾಖಲಿಸಿದ ಸಂಖ್ಯೆಯನ್ನು ಮೀರಿ, ಹೊಸ ಇತಿಹಾಸ ನಿರ್ಮಿಸಲು ಬಿಜೆಪಿ ರಣತಂತ್ರ ರೂಪಿಸಿದೆ.

ಟಾರ್ಗೆಟ್ 400 ಎಂಬ ಕಾರ್ಯಾಚರಣೆಗೆ ಬಿಜೆಪಿ ಸದ್ದಿಲ್ಲದೆ ವ್ಯೂಹ ರಚನೆ ಮಾಡಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 150 ದಿನ 3570 ಕಿಲೋ ಮೀಟರ್ ಪಾದಯಾತ್ರೆ ನಡೆಸಿ ಜನಮನ ಗೆದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರಲು ಹರ ಸಾಹಸ ಪಡುತ್ತಿದ್ದಾರೆ.

ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸದ್ದಿಲ್ಲದೆ ರಣತಂತ್ರ ರೂಪಿಸಿದ್ದು, ಪಕ್ಷದಲ್ಲಿ ಟಾರ್ಗೆಟ್ 400 ಗುರಿಗೆ ತಯಾರಿ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಇದಕ್ಕಾಗಿ ಸಮರೋಪಾದಿಯಲ್ಲಿ ಕಾರ್ಯಚಟುವಟಿಕೆಗಳು ಆರಂಭವಾಗಿವೆ.

ಬಿಜೆಪಿ ತನ್ನೆಲ್ಲಾ ರಾಜ್ಯ ಘಟಕಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ಚುನಾವಣೆ ತಯಾರಿಗಾಗಿ ಚುರುಕಿನ ಕಾರ್ಯಾಚರಣೆ ಆರಂಭಿಸುವಂತೆ ಸೂಚಿಸಿದೆ. ಈ ಮೊದಲು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 545 ಸ್ಥಾನಗಳ ಪೈಕಿ ಬಿಜೆಪಿ 282 ಸ್ಥಾನಗಳನ್ನು ಮಾತ್ರ ಗೆದ್ದು ಮೈತ್ರಿ ಸರ್ಕಾರ ರಚಿಸಿತ್ತು.

ಬಿಜೆಪಿ ಮತಗಳಿಗೆ ಪ್ರಮಾಣ ಶೇ.31ರಷ್ಟಿತ್ತು. ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದಲ್ಲಿ ಕೂರುವ ಅರ್ಹತೆಯನ್ನು ಕಳೆದುಕೊಂಡಿತ್ತು. ಕಾಂಗ್ರೆಸ್ ಮತಗಳಿಗೆ ಪ್ರಮಾಣ ಶೇ.19ಕ್ಕೆ ಕುಸಿದಿತ್ತು. ಉಳಿದಂತೆ ಪ್ರಾದೇಶಿಕ ಪಕ್ಷಗಳು ಮತ ಗಳಿಕೆಯಲ್ಲಿ ಚೇತರಿಕೆ ಕಂಡಿದ್ದವು.

ಆ ಚುನಾವಣೆಯಲ್ಲಿ ದಕ್ಷಿಣ ಭಾರತ, ಪೂರ್ವ ರಾಜ್ಯಗಳಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಿರಲಿಲ್ಲ. ಈಶಾನ್ಯ ಭಾಗ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಗೆಲುವು ಕಂಡಿತ್ತಾದರೂ ಹೇಳಿಕೊಳ್ಳುವ ಸಾಧನೆಯಾಗಿರಲಿಲ್ಲ. ಪಶ್ಚಿಮ ವಲಯ ಮತ್ತು ಉತ್ತರ ಭಾರತದಲ್ಲಿ ಬಿಜೆಪಿ ತನ್ನದೆ ಆದ ಭದ್ರಕೋಟೆಯನ್ನು ಹೊಂದಿತ್ತು.

2019ರ ವೇಳೆಗೆ ಬಿಜೆಪಿ ಮತಗಳಿಕೆಯಲ್ಲಿ ಶೇ.6ರಷ್ಟನ್ನು ವೃದ್ಧಿಸಿಕೊಂಡಿದ್ದು, ಒಟ್ಟು ಗೆದ್ದ ಕ್ಷೇತ್ರಗಳ ಸಂಖ್ಯೆ 303ಕ್ಕೆ ಹೆಚ್ಚಾಯಿತು. ಮತಗಳಿಕೆ ಶೇ.37.30ರಷ್ಟಾಯಿತು. ಕಾಂಗ್ರೆಸ್ ಮತಗಳಿಗೆ ಶೇ.19ನ್ನು ದಾಟಲಿಲ್ಲ. ಕಾಂಗ್ರೆಸ್ ಒಟ್ಟು ಗೆದ್ದ ಸಂಖ್ಯೆ 52ರಷ್ಟಾಗಿದ್ದರೂ ಕೈ ಪಡೆಯ ಏಳಿಗೆ ನಿರೀಕ್ಷಿತವಾಗಿರಲಿಲ್ಲ.

ಇದಕ್ಕೆ ಪ್ರತಿಯಾಗಿ ಡಿ.ಎಂ.ಕೆ., ವೈಎಸ್‍ಆರ್ ಕಾಂಗ್ರೆಸ್, ಸಮಾಜವಾದಿ, ಜೆಡಿಯು, ಟಿಎಸ್‍ಆರ್, ಬಿಜೆಡಿ, ಟಿಎಂಸಿ, ಜೆಎಂಸಿ ಸೇರಿ ಹಲವು ಪ್ರಾದೇಶಿಕ ಪಕ್ಷಗಳು ತಮ್ಮ ಸಾಮಥ್ರ್ಯವನ್ನು ವೃದ್ಧಿಸಿಕೊಂಡವು. ಪ್ರಾದೇಶಿಕ ಪಕ್ಷಗಳು ಬಹುತೇಕ ಕಾಂಗ್ರೆಸ್‍ನ ಮತ ಬ್ಯಾಂಕ್ ಅನ್ನೇ ಕಿತ್ತುಕೊಂಡಿರುವುದರಿಂದ ಬಿಜೆಪಿಗೆ ಅನುಕೂಲವಾಯಿತು. 2024ರ ಲೋಕಸಭೆ ಚುನಾವಣೆಯಲ್ಲೂ ಇದೇ ಸಂಪ್ರದಾಯ ಮುಂದುವರೆಯಲಿದೆ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.

ಪ್ರಸ್ತುತ ಪಿಎಫ್‍ಐ ನಿಷೇಧ ಸೇರಿದಂತೆ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತಕ್ರೋಢಿಕರಣಕ್ಕೆ ಈಗಿನಿಂದಲೇ ಚಟುವಟಿಕೆ ಆರಂಭಿಸುವಂತೆ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ. ಪ್ರಮುಖವಾಗಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಆಂಧ್ರ ಪ್ರದೇಶ, ಬಿಹಾರ, ಗುಜರಾತ್, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಸ್ಸಾ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜ್ಯಗಳಲ್ಲಿ ಪಕ್ಷ ಸಂಘಟನೆಗೆ ಗಮನ ಕೇಂದ್ರಿಕರಿಸಬೇಕು ಎಂದು ಹೈಕಮಾಂಡ್ ಸೂಚಿಸಿದೆ.

ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ಪ್ರಸ್ತುತ ಬಿಜೆಪಿಯೇ ಅಧಿಕಾರದಲ್ಲಿದೆ. ಲೋಕಸಭೆ ಚುನಾವಣೆಗೂ ಮುನ್ನಾ ಗುಜರಾತ್, ಕರ್ನಾಟಕ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಇಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದು ಕಾರ್ಯತಂತ್ರದ ಭಾಗವಾಗಿದೆ.

ಉಳಿದಂತೆ ಆಂಧ್ರ ಪ್ರದೇಶ ಹೊರತು ಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಬಿಜೆಪಿ ವಿರುದ್ಧ ಸೈದ್ಧಾಂತಿಕ ನಿಲುವು ಹೊಂದಿರುವ ಪಕ್ಷಗಳೇ ಅಧಿಕಾರದಲ್ಲಿವೆ. ಅದಕ್ಕಾಗಿ ಬಿಹಾರ, ಕೇರಳ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಪಂಜಾಬ್, ಚತ್ತಿಸ್‍ಗಡ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪಕ್ಷ ಹೆಚ್ಚು ಸಕ್ರಿಯವಾಗಿರಬೇಕು. ಸಂಘ ಪರಿವಾರ ಮತ್ತು ಬಿಜೆಪಿ ಸಮನ್ವಯತೆಯಲ್ಲಿ ವಿಶೇಷ ಕಾರ್ಯ ತಂತ್ರ ಅನುಸರಿಸಬೇಕು ಎಂದು ಸೂಚಿಸಲಾಗಿದೆ.

ಚುನಾವಣೆ ಇನ್ನೂ ಎರಡು ವರ್ಷವಿದೆ ಎಂದು ನಿರ್ಲಕ್ಷ್ಯತೆ ಪ್ರದರ್ಶಿಸದೆ ಟಾರ್ಗೆಟ್ 400ಗೆ ತಕ್ಷಣದಿಂದಲೇ ಕಾರ್ಯಾರಂಭಿಸಲು ಸೂಚಿಸಲಾಗಿದೆ. ಕಳೆದ ಬಾರಿ ಅತಿ ಕಡಿಮೆ ಅಂತರದಲ್ಲಿ ಸೋಲು ಕಂಡ 144 ಕ್ಷೇತ್ರಗಳತ್ತ ಗಮನ ಹರಿಸಬೇಕು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ 1984ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 414 ಸ್ಥಾನಗಳನ್ನು ಗೆದ್ದು ದಾಖಲೆ ಬರೆದಿದೆ. ಈವರೆಗೂ ಅದನ್ನು ಮುರಿಯಲು ಯಾವ ಪಕ್ಷಕ್ಕೂ ಸಾಧ್ಯವಾಗಿಲ್ಲ. ಬಿಜೆಪಿ ಎರಡು ಅವಧಿ ಸತತವಾಗಿ ಅಧಿಕಾರ ನಡೆಸಿದೆ. ಮೂರನೇ ಬಾರಿಯೂ ಮತ್ತೆ ಅಧಿಕಾರ ಹಿಡಿಯಬೇಕು, ಕೇವಲ ಮರಳಿ ಅಧಿಕಾರಕ್ಕೆ ಬರುವುದು ಮುಖ್ಯವಲ್ಲ, ಹಿಂದಿನ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸುವ ಮೂಲಕ ಐತಿಹ್ಯ ಸಾಧಿಸಬೇಕು ಎಂದು ಇಂಗಿತವನ್ನು ಹೈಕಮಾಂಡ್ ಹೊಂದಿದೆ ಎನ್ನಲಾಗಿದೆ. ಹೀಗಾಗಿ ದೆಹಲಿಯಲ್ಲಿ ನಾಳೆಯಿಂದ ಸರಣಿ ಸಭೆಗಳು ಆರಂಭವಾಗಲಿವೆ ಎಂದು ಮೂಲಗಳು ತಿಳಿಸಿವೆ.

Articles You Might Like

Share This Article