ಬೆಂಗಳೂರು,ಆ.8- ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ನಡುವೆ ನಿಟ್ಟಿನಲ್ಲಿ ಹಾಲಿ ಅರ್ಧ ಡಜನ್‍ಗೂ ಅಧಿಕ ಸಂಸದರಿಗೆ ಗೇಟ್ ಪಾಸ್ ನೀಡುವುದು ಖಚಿತವಾಗಿದೆ. ಕೆಲವು ಸಂಸದರು ಸೋಲುವ ಭೀತಿಯಲ್ಲಿರುವುದು ಒಂದು ಕಾರಣವಾದರೆ, ಎರಡನೇ ಹಂತದ ಕಾರ್ಯಕರ್ತರಿಗೆ ಮಣೆ ಹಾಕುವ ಮೂಲಕ ಪಕ್ಷವನ್ನು ಬಲಪಡಿಸುವುದು ರಾಷ್ಟ್ರೀಯ ಬಿಜೆಪಿ ನಾಯಕರ ಲೆಕ್ಕಚಾರವಾಗಿದೆ.
ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದ ಗೌಡ, ಚಿಕ್ಕಬಳ್ಳಾಪುರದ ಬಿ.ಎನ್. ಬಚ್ಚೇಗೌಡ, ತುಮಕೂರಿನ ಜಿ.ಎಂ.ಬಸವರಾಜ್, ಚಾಮರಾಜನಗರದ ವಿ.ಶ್ರೀನಿವಾಸ ಪ್ರಸಾದ್, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್, ವಿಜಯಪುರದ ರಮೇಶ್ ಜಿಗಜಿಣಗಿ ಅವರಿಗೆಲ್ಲಾ ಟಿಕೆಟ್ ಸಿಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ಈ ಸಂಸದರ ಗೆಲುವಿನ ಸಾಧ್ಯತೆಯೂ ಕ್ಷೀಣವಾಗಿರುವುದನ್ನು ಮನಗಂಡಿರುವ ವರಿಷ್ಠರು, ಆ ಕ್ಷೇತ್ರಗಳಲ್ಲಿ ಹೊಸ ಮುಖಗಳ ಹುಡುಕಾಟದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಆರರಿಂದ ಏಳು ಲೋಕಸಭಾ ಕ್ಷೇತ್ರದ ಹಾಲಿ ಎಂಪಿಗಳನ್ನು ಕೈ ಬಿಡುವ ಸಾಧ್ಯತೆ ಇದೆ. ಹೀಗಾಗಿ, ಚುನಾವಣೆಗೆ ಎರಡು ವರ್ಷ ಇರುವಾಗಲೇ ನೂತನ ಅಭ್ಯರ್ಥಿಗಳಿಗಾಗಿ ಹುಡುಕಾಟ ಪ್ರಾರಂಭವಾಗಿದೆ.
ಈ ಸಂಸದರ ಗೆಲುವಿನ ಸಾಧ್ಯತೆಯೂ ಕ್ಷೀಣವಾಗಿರುವುದನ್ನು ಮನಗಂಡಿರುವ ವರಿಷ್ಠರು, ಆ ಕ್ಷೇತ್ರಗಳಲ್ಲಿ ಹೊಸ ಮುಖಗಳ ಹುಡುಕಾಟದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಹೊಸಮುಖ, ಯುವಮುಖ, ಜಾತಿ ಪ್ರಾಬಲ್ಯ, ಜನಪ್ರಿಯತೆ ಬಿಜೆಪಿಯ ಸಿದ್ಧಾಂತವಾಗಿದ್ದು, ಶುದ್ಧಹಸ್ತ, ವಿದ್ಯಾವಂತ, ಉತ್ತಮ ಚಾರಿತ್ರ್ಯ ಇರುವಂತವರಿಗೆ ಆದ್ಯತೆ ನೀಡಲು ಪಕ್ಷ ಮುಂದಾಗಿದೆ.
ಇದಕ್ಕಾಗಿ 6 ಕ್ಷೇತ್ರಗಳಲ್ಲಿ ಕಾರ್ಯಾರಂಭವಾಗಿದೆಯಂತೆ. ಯುವಕರಿಗೆ ಛಾನ್ಸ್ ಕೊಡುವ ದೂರದೃಷ್ಟಿ ಇಟ್ಟುಕೊಂಡಿರುವ ಬಿಜೆಪಿ, ಹೊಸ ಮತದಾರರ ಜೊತೆಗೆ ಹಳೆ ಮತದಾರರ ವಿಶ್ವಾಸವನ್ನೂ ಕಳೆದುಕೊಳ್ಳದಂತೆ ಯೋಜನೆ ರೂಪಿಸುತ್ತಿದೆ.
70-75 ವರ್ಷ ದಾಟಿದ ಸಂಸದರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೊಕ್ ನೀಡುವುದು ಖಚಿತವಾಗಿದ್ದು, ಯುವಕರತ್ತ ಕೇಸರಿ ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದೆ.