Thursday, September 19, 2024
Homeರಾಷ್ಟ್ರೀಯ | Nationalಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಸಟ್ಟಾ ಬಜಾರ್‌ ಅಚ್ಚರಿಯ ಭವಿಷ್ಯ

ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಸಟ್ಟಾ ಬಜಾರ್‌ ಅಚ್ಚರಿಯ ಭವಿಷ್ಯ

ನವದೆಹಲಿ,ಮೇ17- ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆ ಈ ಬಾರಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಎನ್‌ಡಿಎ- ಇಂಡಿಯಾ ಮೈತ್ರಿಕೂಟ ನಡುವೆ ಭಾರೀ ಜಿದ್ದಾಜಿದ್ದಿ ಏರ್ಪಪಟ್ಟಿರುವ ಬೆನ್ನಲ್ಲೇ ಚುನಾವಣಾ ಫಲಿತಾಂಶಗಳ ನಿಖರ ಅಂದಾಜಿಗೆ ಹೆಸರುವಾಸಿಯಾಗಿರುವ ಫಲೋಡಿ ಸಟ್ಟಾಬಜಾರ್‌ ಅಚ್ಚರಿಯ ಭವಿಷ್ಯ ನುಡಿದಿದೆ.

543-ಸದಸ್ಯರನ್ನು ಹೊಂದಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಅಧಮ್ಯ ವಿಶ್ವಾಸದಲ್ಲಿದೆ. ಆದರೆ ದೇಶದ ಹಲವು ಚುನಾವಣೆಗಳ ಫಲಿತಾಂಶಗಳನ್ನು ನಿಖರವಾಗಿ ಅಂದಾಜು ಮಾಡುವ ಸಟ್ಟಾಬಜಾರ್‌, ಈ ಬಾರಿ ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇಲ್ಲ ಎಂದು ಅಂದಾಜಿಸಿದೆ.

ಸದ್ಯ ದೇಶಾದ್ಯಂತ ಸತ್ತಾ ಬಜಾರ್‌ ಮಾರುಕಟ್ಟೆಯಲ್ಲಿ ಬಿಜೆಪಿಯೇ ಮತ್ತೊಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬುಕ್ಕಿಗಳು ಅಂದಾಜು 18ರಿಂದ 20 ಸಾವಿರ ಕೋಟಿ ಬೆಟ್ಟಿಂಗ್‌ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಮೊದಲ ನಾಲ್ಕು ಹಂತದ ಚುನಾವಣೆಗಳಲ್ಲಿ 543 ಸ್ಥಾನಗಳ ಪೈಕಿ 379 ಸ್ಥಾನಗಳಲ್ಲಿ ಮತದಾನ ಮುಕ್ತಾಯವಾಗಿದ್ದು, ಒಟ್ಟು ಸ್ಥಾನಗಳ ಶೇಕಡ 70ರಷ್ಟಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಇಲ್ಲಿಯವರೆಗೆ ನಾಲ್ಕು ಹಂತಗಳಲ್ಲಿ ಕಂಡುಬರುವ ಮತದಾನದ ಶೇಕಡಾವಾರು ಕುಸಿತದ ಅಂಶವನ್ನು ಆಧರಿಸಿ, ಫಲೋಡಿ ಸಟ್ಟಾ ಬಜಾರ್‌ ತನ್ನ ಅಂದಾಜನ್ನು ಬಿಜೆಪಿಗೆ ನೀಡಿರುವ ಸ್ಥಾನವನ್ನು ಪರಿಷ್ಕರಿಸಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಗೆದಿದ್ದ ಸ್ಥಾನಗಳಿಗಿಂತ ಈ ಬಾರಿ ಕಡಿಮೆ ಸ್ಥಾನ ಗೆಲ್ಲಬಹುದೆಂದು ಭವಿಷ್ಯ ನುಡಿದಿದೆ.

ನಾಲ್ಕನೇ ಹಂತದ ಚುನಾವಣೆಗೆ ಮೊದಲು, ಫಲೋಡಿ ಸತ್ತಾ ಬಜಾರ್‌ ಬಿಜೆಪಿಗೆ 307ರಿಂದ 310 ಸ್ಥಾನಗಳನ್ನು ಗೆಲ್ಲುವ ಭರವಸೆ ನೀಡಿತ್ತು. ಈಗ ಬಿಜೆಪಿಗೆ 296-300 ಸ್ಥಾನಗಳಿಗೆ ಮತ್ತು ರಾಷ್ಟ್ರೀಯ ಪ್ರಜಾಸತ್ತಾತಕ ಮೈತ್ರಿಕೂಟಕ್ಕೆ 329ರಿಂದ 332 ಸ್ಥಾನಗಳನ್ನು ಗೆಲ್ಲಬಹುದೆಂದು ಅಂದಾಜಿಸಿದೆ.

ಕಾಂಗ್ರೆಸ್‌‍ ಈ ಬಾರಿ ಅಧಿಕೃತ ವಿರೋಧ ಪಕ್ಷದ ಸ್ಥಾನಕ್ಕೆ ಬೇಕಾದ 52ಕ್ಕಿಂತ ಹೆಚ್ಚು ಸ್ಥಾನಗಳನ್ನು ಅಂದರೆ 58 ರಿಂದ 62 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಫೆಲೋಡಿ ಸಟ್ಟಾಬಜಾರ್‌ ಪ್ರಕಾರ, ಬಿಜೆಪಿ ಗುಜರಾತ್‌ನಲ್ಲಿ ಎಲ್ಲಾ 26 ಸ್ಥಾನ, ಮಧ್ಯಪ್ರದೇಶದ 29 ಸ್ಥಾನಗಳ ಪೈಕಿ ಬಿಜೆಪಿ 27-28 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಆದರೆ ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ಈ ಬಾರಿ 25 ಸ್ಥಾನಗಳಲ್ಲಿ 18-20 ಸ್ಥಾನಗಳನ್ನು ಗೆಲ್ಲಬಹುದೆಂದು ಭವಿಷ್ಯ ನುಡಿದಿದೆ.

ಒಡಿಶಾದ 21 ಸ್ಥಾನಗಳಲ್ಲಿ, ಬಿಜೆಪಿ 11-12, ಪಂಜಾಬ್‌ನಲ್ಲಿ 2ರಿಂದ3 ಸ್ಥಾನ, ಹರಿಯಾಣದಲ್ಲಿ 5-6 ಸ್ಥಾನ, ತೆಲಂಗಾಣ 5-6, ಹಿಮಾಚಲಪ್ರದೇಶ 4, ಉತ್ತರಾಖಂಡದ 5, ಛತ್ತೀಸ್‌‍ಗಢದ 11ರಿಂದ 11, ಜಾರ್ಖಂಡ್‌ನಲ್ಲಿ 10-11, ದೆಹಲಿಯಲ್ಲಿ 6-7, ತಮಿಳುನಾಡಿನಲ್ಲಿ 3-4 ಸ್ಥಾನ,ಪಶ್ಚಿಮ ಬಂಗಾಳದಲ್ಲಿ 21-23, ಉತ್ತರಪ್ರದೇಶದಲ್ಲಿ 64-65 ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿಸಿದೆ.

ತೀವ್ರ ಹಣಾಹಣಿಯಿರುವ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಜೆಡಿಎಸ್‌‍ ನೇತೃತ್ವದ ಎನ್‌ಡಿಎ ಮೈತ್ರಿಕೂಟ 18ರಿಂದ 20 ಸ್ಥಾನಗಳನ್ನು ಗೆಲ್ಲಬಹುದೆಂದು ಅಂದಾಜು ಮಾಡಿದೆ.

ಕಳೆದ ಮೂರು ದಶಕಗಳಿಂದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಗಿದ ನಂತರ ನಿಖರವಾಗಿ ಫಲಿತಾಂಶ ಅಂದಾಜು ಮಾಡುವ ಫೆಲೋಡಿ ಸಟ್ಟಾ ಬಜಾರ್‌ನಲ್ಲಿ ಯಾವಾಗಲೂ ದೊಡ್ಡ ಮೊತ್ತದ ಬೆಟ್ಟಿಂಗ್‌ ನಡೆಯುತ್ತದೆ. ಇಲ್ಲಿ ಸರಿಸುಮಾರು ಶೇ.90ರಷ್ಟು ನಿಖರವಾದ ಫಲಿತಾಂಶ ಇರುತ್ತದೆ ಎಂದು ಬುಕ್ಕಿಗಳು ಹೇಳುತ್ತಾರೆ.

ದೇಶದ ಉಳಿದ 164 ಸ್ಥಾನಗಳಿಗೆ ಮೇ 20, ಮೇ 25 ಮತ್ತು ಜೂನ್‌ 1ರಂದು ಕ್ರಮವಾಗಿ ಐದು, ಆರು ಮತ್ತು ಏಳನೇ ಹಂತದ ಲೋಕಸಭೆ ಚುನಾವಣೆಗಳಲ್ಲಿ ಮತದಾನ ನಡೆಯಲಿದೆ.

RELATED ARTICLES

Latest News