ಬೆಂಗಳೂರು,ಆ.12-ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವನ್ನು ರದ್ದುಪಡಿಸಿ ಲೋಕಾಯುಕ್ತಕ್ಕೆ ಶಕ್ತಿ ತುಂಬುವ ತೀರ್ಪನ್ನು ರಾಜ್ಯ ಹೈಕೋರ್ಟ್ ನೀಡಿದ್ದು, ಅದನ್ನು ಸ್ವಾಗತಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ಸರಿಯಾಗಿದೆ. ಸರ್ಕಾರ ಲೋಕಾಯುಕ್ತರ ವಿರೋಧವಾಗಿರಲಿಲ್ಲ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟ ಮಾಡಿದ್ದರೆ ? ಏನು ಹೇಳಿದರೂ ನಡೆಯುತ್ತದೆ ಎಂದು ಮಾತನಾಡುತ್ತಾರೆ. ಅವರಿಗೆ 75 ವರ್ಷ. ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಬಿಜೆಪಿ ಮತ್ತು ಆರ್‍ಎಸ್‍ಎಸ್‍ನವರಿಗೆ ರಾಷ್ಟ್ರಭಕ್ತಿ ಭಾವನೆ ಬಗ್ಗೆ ಯಾರೂ ಪಾಠ ಮಾಡಬೇಕಿಲ್ಲ. ಚಿಕ್ಕಂದಿನಿಂದಲೂ ಆರ್‍ಎಸ್‍ಎಸ್‍ನಲ್ಲಿ ರಾಷ್ಟ್ರಭಕ್ತಿಯ ಸಂಸ್ಕಾರವನ್ನು ಪಡೆದಿದ್ದೇವೆ. ಅದರ ಬಗ್ಗೆ ಯಾರೂ ಹೇಳಿಕೊಡಬೇಕಾದ ಅಗತ್ಯವಿಲ್ಲ ಎಂದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ಹರ್‍ಘರ್ ತಿರಂಗ ಆಚರಿಸಲಾಗುತ್ತಿದೆ. ವೈಯಕ್ತಿಕ ರಾಜಕಾರಣಕ್ಕಿಂತ ರಾಷ್ಟ್ರ ದೊಡ್ಡದು ಎಂಬ ಭಾವನೆ ಇದರಿಂದ ಮೂಡಲಿದೆ. ಮನೆ ಮನೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಡೆಯುತ್ತಿದೆ. ಸ್ವತಂತ್ರಕ್ಕಾಗಿ ಹೋರಾಟ ಮಾಡಿದವರ ತ್ಯಾಗ, ಬಲಿದಾನಗಳ ಸ್ಮರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೊಪ್ಪಳದ ಹಳ್ಳಿಯೊಂದರಲ್ಲಿ ವೈಷಮ್ಯದಿಂದ ಘರ್ಷಣೆ ಉಂಟಾಗಿ ಇಬ್ಬರು ಮೃತರಾಗಿದ್ದಾರೆ. ಘಟನೆ ಬಗ್ಗೆ ಪೊಲೀಸರು ಸೂಕ್ತ ಕೈಗೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.