ಬೆಂಗಳೂರು,ಮಾ.4- ಕೆಎಸ್‍ಡಿಎಲ್ ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ವಿಚಾರಣೆಗೊಳಪಡಿಸಲು ಲೋಕಾಯುಕ್ತ ಸಂಸ್ಥೆ ತೀರ್ಮಾನಿಸಿದೆ.
ಬೆಂಗಳೂರು ನೀರು ಸರಬರಾಜು ಮಂಡಳಿಯಲ್ಲಿ ಲೆಕ್ಕಾಧಿಕಾರಿಯಾಗಿರುವ ಪುತ್ರ ಪ್ರಶಾಂತ್ ಮಾಡಾಳ್ ಅವರು ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬೀಳುತ್ತಿದ್ದಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ನಾಪತ್ತೆಯಾಗಿದ್ದಾರೆ.
ಪ್ರಶಾಂತ್ ಸಿಕ್ಕಿ ಬಿದ್ದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ನಗರದಲ್ಲಿ ವಿರೂಪಾಕ್ಷಪ್ಪ ಅವರ ನಿವಾಸ ಹಾಗೂ ಚನ್ನಗಿರಿಯ ನಿವಾಸಗಳ ಮೇಲೂ ದಾಳಿ ನಡೆಸಿ 8.28 ಕೋಟಿ ರೂ.ಗಳಿಗೂ ಹೆಚ್ಚು ನಗದು, ಚಿನ್ನಾಭರಣ ಹಾಗೂ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾ.26ಕ್ಕೆ ಜೆಡಿಎಸ್ ಪಂಚರತ್ನ ಸಮಾರೋಪ
ಲೋಕಾಯುಕ್ತ ಪೊಲೀಸರು ಕೆಎಸ್‍ಡಿಎಲ್ ಸಂಸ್ಥೆಯ ಅಧ್ಯಕ್ಷರಾಗಿದ್ದ ವಿರೂಪಾಕ್ಷಪ್ಪ ಅವರ ಕರ್ಮಕಾಂಡ ಬೆಳಕಿಗೆ ಬರುತ್ತಿದ್ದಂತೆ ಲಂಚ ಪ್ರಕರಣದಲ್ಲಿ ಅವರನ್ನು ಮೊದಲನೆ ಆರೋಪಿಯನ್ನಾಗಿ ಮಾಡಿದ್ದಾರೆ.
ಹೀಗಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಶೀಘ್ರದಲ್ಲೇ ನೋಟೀಸ್ ಜಾರಿ ಮಾಡಿ ಅವರನ್ನು ತೀವ್ರ ವಿಚಾರಣೆಗೊಳಪಡಿಸಲು ನಿರ್ಧರಿಸಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆಯ ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ.
ಕೆಎಸ್‍ಡಿಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಈಗಾಗಲೇ ಪ್ರಶಾಂತ್ ಮಾಡಾಳ್, ಅವರ ಖಾಸಗಿ ಆಕೌಟೆಂಟ್ ಹಾಗೂ ಲಂಚ ನೀಡಲು ಬಂದಿದ್ದ ಇತರ ಮೂವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಹಾರಾಷ್ಟ್ರದ ಆರು ಕೆಮ್ಮು ಸಿರಪ್ ತಯಾರಕ ಕಂಪನಿಗಳ ಪರವಾನಗಿ ಅಮಾನತು
ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರರ ಆರೋಪಿಗಳ ವಿರುದ್ಧದ ಕಾರ್ಯಚರಣೆಯನ್ನು ತೀವ್ರಗೊಳಿಸಿರುವ ಲೋಕಾಯುಕ್ತ ಪೊಲೀಸರು ಶೀಘ್ರದಲ್ಲೇ ತಲೆಮರೆಸಿಕೊಂಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೂ ನೋಟೀಸ್ ಜಾರಿ ಮಾಡಿ ವಿಚಾರಣೆಗೊಳಪಡಿಸಲು ತೀರ್ಮಾನಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.
Lokayukta, officials, raid, BJP, MLA, Madal Virupakshappa,