Thursday, November 21, 2024
Homeರಾಜ್ಯರಾಜ್ಯದ 11 ಜಿಲ್ಲೆಗಳಲ್ಲಿ 56 ಕಡೆ ಲೋಕಾಯುಕ್ತ ದಾಳಿ

ರಾಜ್ಯದ 11 ಜಿಲ್ಲೆಗಳಲ್ಲಿ 56 ಕಡೆ ಲೋಕಾಯುಕ್ತ ದಾಳಿ

ಬೆಂಗಳೂರು, ಜು.11 – ಬೆಳ್ಳಂಬೆಳಗ್ಗೆ ಸುಮಾರು 100ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳ ತಂಡ ರಾಜ್ಯದ 56 ಸ್ಥಳಗಳಲ್ಲಿ ದಾಳಿ ನಡೆಸಿ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.ಒಂದೆಡೆ ನಿನ್ನೆಯಷ್ಟೇ ವಾಲೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ಮಾಡಿದ್ದರೆ ಇಂದು ಲೋಕಾಯುಕ್ತ ಪೊಲೀಸರು ಭ್ರಷ್ಟರ ಮನೆಗಳ ಮೇಲೆ ಮೆಗಾ ರೇಡ್ ಮಾಡಿದ್ದಾರೆ.

ಆದಾಯಕ್ಕೂ ಮೀರಿ ಅಕ್ರಮ ಆಸ್ತಿಗಳಿಕೆ ದೂರುಗಳ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದು, 11 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಹಾಸನ, ಬೆಂಗಳೂರು, ಕೋಲಾರ, ಮೈಸೂರು, ದಾವಣಗೆರೆ, ಬಳ್ಳಾರಿ, ಧಾರವಾಡ, ಬೆಳಗಾವಿ, ಕಲ್ಬುರ್ಗಿ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಸುಮಾರು 100 ಅಧಿಕಾರಿಗಳ ತಂಡಗಳು 56 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಗೇರಿ ವಿಭಾಗದಲ್ಲಿರುವ ಕಂದಾಯ ಅಧಿಕಾರಿ ಬಸವರಾಜ ಮಾಗಿ ಅವರು ಮೂಲತಃ ಕಲ್ಬುರ್ಗಿಯವರಾಗಿದ್ದು, ಬೆಂಗಳೂರು ಹಾಗೂ ಕಲಬುರಗಿ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಬಂಗಾರ, ನಗದು ಹಣ ಪತ್ತೆಯಾಗಿದ್ದು, ಇದಲ್ಲದೆ ಲಕ್ಷಾಂತರ ಮೊತ್ತದ ಕ್ಯಾಪ್ಸಿ ಕಾಯಿನ್ಗಳು ಪತ್ತೆಯಾಗಿದ್ದು ಅಧಿಕಾರಿಗಳೇ ಬೆರಗಾಗಿದ್ದಾರೆ.

ಮಂಡ್ಯ:
ನಗರದ ನಿವೃತ್ತ ಎಕ್ಸಿಕ್ಯೂಟಿವ್ ಎಂಜಿನಿಯರ್ ಶಿವರಾಜ್ ಅವರ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ. ನಾಗಮಂಗಲ ತಾಲೂಕಿನ ಇಜ್ಜಲಘಟ್ಟದಲ್ಲಿರುವ ಫಾರ್ಮಹೌಸ್, ಶಿವರಾಜ್ ತಂದೆ ಮನೆ ಹಾಗೂ ಇವರು ಜಲ್ಲಿ ಕ್ರಷರ್ ವ್ಯವಹಾರ ಹೊಂದಿದ್ದು ಅಲ್ಲೂ ಕೂಡ ದಾಳಿ ನಡೆದಿದೆ. ಲೋಕಾಯುಕ್ತ ಎಸ್ ಪಿ ಸುರೇಶ್ ಬಾಬು ನೇತತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಹಾಸನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಉತ್ತರ ದಾಸನಪುರ ಗ್ರಾಪಂ ಕಾರ್ಯದರ್ಶಿ ಎನ್.ಎಂ. ಜಗದೀಶ್ಗೆ ಶಾಕ್ ನೀಡಿದ್ದಾರೆ. ಹಾಸನದ ಅವರ ಮನೆ, ಬೆಂಗಳೂರಿನಲ್ಲಿರುವ ಮನೆಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ. ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.

ಕೋಲಾರದಲ್ಲಿ ತಹಸೀಲ್ದಾರ್, ಸೂಪರಿಂಟೆಂಡಿಂಗ್ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮನೆಗಳ ಮೇಲೆ ದಾಳಿ ನಡೆದಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನಲ್ಲಿ ನೀರಾವರಿ ಇಲಾಖೆಯ ಸೂಪರಿಡೆಂಟ್ ಇಂಜಿನಿಯರ್ ಮಹೇಶ್ ಅವರ ಜೆಸಿ ನಗರದಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಜತೆಗೆ, ಗೋಕುಲಂ ಕಚೇರಿಯಲ್ಲಿಯೂ ದಾಳಿ ನಡೆದಿದ್ದು ಹಲವು ಕಡೆ ನಿವೇಶನ, ಕೃಷಿ ಜಮೀನು ಸೇರಿ ನಗದು, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಟಾಗೋರ್, ಮಹಾನಿರೀಕ್ಷಕ ಸುಬ್ರಮಣ್ಯೇಶ್ವರ ರಾವ್, ಮೈಸೂರು ಪ್ರಭಾರ ಎಸ್ಪಿ ಸುರೇಶ್ಬಾಬು ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ, ಇನ್‌್ಸಪೆಕ್ಟರ್ಗಳಾದ ರವಿಕುಮಾರ್, ಜಯರತ್ನ, ಲೋಕೇಶ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗಾವಿ:
ಬೆಳಗಾವಿ ಜಿಪಂ ಎಇಇ ಮಹದೇವ ಬನ್ನೂರ ಅವರ ಮನೆ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬೆಳಗಾವಿ ತಾಲೂಕಿನ ಯಳ್ಳೂರ ಹೊರವಲಯದಲ್ಲಿರುವ ಅವರ ಬನ್ನೂರ ಅವರಿಗೆ ಸೇರಿದ ಮನೆಯ ಕೋಣೆ ಕೋಣೆಯಲ್ಲಿ ತಪಾಸಣೆ ನಡೆಸಿದ್ದಾರೆ. ಈ ಹಿಂದೆಯೂ ಸಹ ಮನೆ ಮೇಲೆ ದಾಳಿ ಮಾಡಿ ದಾಖಲೆ ಸಂಗ್ರಹಿಸಿದ್ದರು. ಇದೀಗ ಮತ್ತೊಮೆ ಮುಂದುವರೆದ ಭಾಗವಾಗಿ ಲೋಕಾಯುಕ್ತ ಡಿವೈಎಸ್ಪಿ ಭರತ್ ರೆಡ್ಡಿ, ಇನ್‌್ಸಪೆಕ್ಟರ್ ನಿರಂಜನ್ ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿದೆ.

ಚಿತ್ರದುರ್ಗ:
ಚಿತ್ರದುರ್ಗದಲ್ಲಿ ನಿವೃತ್ತ ಇಂಜಿನಿಯರ್ ಎಂ. ರವೀಂದ್ರಗೆ ಸೇರಿದ ಮನೆ, ಹಿರಿಯೂರು ತಾಲೂಕಿನ ಸೂಗೂರು ಫಾರ್ಮಹೌಸ್ ಹಾಗೂ ಐಮಂಗಲ ಬಳಿ ಬಾಟಲಿ ಫ್ಯಾಕ್ಟರಿ ಮೇಲೂ ಏಕಕಾಲದಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಧಾರವಾಡ:
ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಅವರ ಮನೆ ಹಾಗೂ ಧಾರವಾಡದ ಕೆಸಿಡಿ ರಸ್ತೆಯ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರಗಳಲ್ಲಿರುವ ಪಿಜಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ರಾಮನಗರ:
ಜಿಲ್ಲೆಯ ಹಾರೋಹಳ್ಳಿ ತಹಸೀಲ್ದಾರ್ ವಿಜಿಯಣ್ಣ ಅವರಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.ವಿಜಿಯಣ್ಣ ಅವರು ಈ ಮೊದಲು ಕೋಲಾರ ತಹಸೀಲ್ದಾರ್ ಆಗಿದ್ದರು. ಲೋಕಾಯುಕ್ತ ಎಸ್ಪಿ ಉಮೇಶ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

RELATED ARTICLES

Latest News