ಬೆಂಗಳೂರು, ಸೆ.30- ಸೂರ್ಯೋದಯಕ್ಕೆ ಮುನ್ನವೇ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ವಿವಿಧ ಚೆಕ್ ಪೋಸ್ಟ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಮುಂಜಾನೆ ನಾಲ್ಕು ಗಂಟೆಗೆ ಏಕಕಾಲದಲ್ಲಿ ಕೆಲವೆಡೆ ಮಾರುವೇಶದಲ್ಲಿ ಚೆಕ್ ಪೋಸ್ಟ್ ಬಳಿ ನಿಂತು ಸರಕು ಸಾಗಣೆ ವಾಹನಗಳ ತಪಾಸಣೆಯನ್ನು ಪರಿಶೀಲಿಸಿ ನಂತರ ಕಚೇರಿಗಳಿಗೆ ಎಂಟ್ರಿ ಕೊಟ್ಟು ಅಲ್ಲಿದ್ದ ಸಿಬ್ಬಂದಿಗಳಿಗೆ ಶಾಕ್ ನೀಡಿದ್ದಾರೆ.
ಬೆಂಗಳೂರು, ವಿಜಯಪುರ, ಚಿಕ್ಕಾಬಳ್ಳಪುರ, ಬೆಳಗಾವಿ, ಕೋಲಾರ, ಹೊಸಪೇಟೆ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳ ಪ್ರಮುಖ ಚೆಕ್ ಪೋಸ್ಟ್ ಗಳ ಮೇಲೆ ಈ ದಾಳಿ ನಡೆದಿದ್ದು, ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಅತ್ತಿಬೆಲೆ ಬಳಿ ಇರುವ ಆರ್‍ಟಿಓ ಕಚೇರಿಗೆ ಸುಮಾರು 20ಕ್ಕೂ ಹೆಚ್ಚು ಅಕಾರಿಗಳು ಮತ್ತು ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ತಮಿಳುನಾಡು- ಕರ್ನಾಟಕ ಗಡಿ ಚೆಕ್‍ಪೋಸ್ಟ್ ಆಗಿರುವ ಹಿನ್ನೆಲೆಯಲ್ಲಿ ಇಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ರಹದಾರಿ ಹಾಗೂ ತೆರಿಗೆ ಪಾವತಿಸಿರುವ ಬಗ್ಗೆ ಸರಿಯಾದ ದಾಖಲೆಗಳನ್ನು ಪರಿಶೀಲಿಸದೇ ಲಂಚ ಪಡೆದು ಕೆಲ ವಾಹನಗಳನ್ನು ಬಿಡುತ್ತಿರುವ ಬಗ್ಗೆ ದೂರುಗಳು ಬಂದಿತ್ತು.
ಇದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಸ್ವಯಂ ದೂರು ದಾಖಲಿಸಿಕೊಂಡು ಬೆಂಗಳೂರು ನಗರ ಜಿಲ್ಲೆಯ ಲೋಕಾಯುಕ್ತ ಎಸ್‍ಪಿ ಶ್ರೀನಾಥ್ ಜೋಶಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಇನ್ನು ಪದೇ ಪದೇ ಅಕ್ರಮದ ಕೇಂದ್ರ ಬಿಂದು ಎಂದು ಹೇಳಲಾಗಿರುವ ಹೊಸಪೇಟೆಯ ಜಳಕಿ ಚೆಕ್ ಪೋ ಸ್ಟ್ ಬಳಿ ತಲೆಗೆ ರೂಮಾಲು ಕಟ್ಟಿಕೊಂಡು ನಿಂತಿದ್ದ ಲೋಕಾಯುಕ್ತ ಅಕಾರಿಗಳ ಹಾಗೂ ಸಿಬ್ಬಂದಿ ಈ ಮಾರ್ಗದಲ್ಲಿ ಬರುವ ವಾಹನಗಳ ಮೇಲೆ ನಿಗಾ ವಹಿಸಿ ನಂತರ ಚೆಕ್ ಪೋ ಸ್ಟ್ ಸಿಬ್ಬಂದಿಗಳಿಗೆ ಚಳಿ ಬಿಡಿಸಿದ್ದಾರೆ.
ಬೆಳಗಾವಿಯ ನಿಪ್ಪಾಣಿ ಬಳಿ ಚೆಕ್ ಪೋಸ್ಟ್, ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಚೆಕ್ ಪೋಸ್ಟ್, ಕೋಲಾರದ ನಂಗ್ಲಿ ಚೆಕ್ ಪೋಸ್ಟ್, ಬಳ್ಳಾರಿ, ಕೊಪ್ಪಳ ಹಾಗೂ ಮೈಸೂರು ಬಳಿಯ ಗುಂಡ್ಲುಪೇಟೆ ಚೆಕ್ ಪೋಸ್ಟ್, ಮತ್ತು ಬೀದರ್ ಹುಮ್ನಾಬಾದ್ ಚೆಕ್ ಪೋಸ್ಟ್ ಮೇಲೆ ದಾಳಿ ನಡೆದಿದೆ.