ಕ್ಲೈಮ್ಯಾಕ್ಸ್ ತಲುಪಿದ ಮಹಾಸಮರ, ಇಂದು ಬಹಿರಂಗ ಪ್ರಚಾರಕ್ಕೆ ತೆರೆ

ನವದೆಹಲಿ, ಮೇ 17 (ಪಿಟಿಐ)-ಹದಿನೇಳನೆ ಲೋಕಸಭೆಗೆ 543 ಸಂಸದರನ್ನು ಚುನಾಯಿಸಲು ನಡೆಯುತ್ತಿರುವ ಮಹಾ ಚುನಾವಣೆಯ ಏಳನೆ ಮತ್ತು ಕೊನೆ ಹಂತಕ್ಕೆ ಮೇ 19ರಂದು ಮತದಾನವಾಗಲಿದ್ದು, ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಕಾರ್ಯ ನಿನ್ನೆ ರಾತ್ರಿ ಅಂತ್ಯಗೊಂಡಿದೆ. ಎಂಟು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.

ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರಾದೇಶಿಕ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿ ಮತದಾರರನ್ನು ಓಲೈಸುವ ಕೊನೆ ನಿಮಿಷಗಳ ತೀವ್ರ ಕಸರತ್ತು ನಡೆಸಿವೆ. ಭಾನುವಾರ ಎಂಟು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ಉತ್ತರ ಪ್ರದೇಶ (13 ಲೋಕಸಭಾ ಕ್ಷೇತ್ರಗಳು), ಪಂಜಾಬ್(13), ಪಶ್ಚಿಮ ಬಂಗಾಳ(9), ಮಧ್ಯಪ್ರದೇಶ (8), ಬಿಹಾರ(8), ಹಿಮಾಚಲ ಪ್ರದೇಶ(4), ಜಾರ್ಖಂಡ್(3) ಹಾಗೂ ಚಂಡೀಗಢ(1)-ಈ ರಾಜ್ಯಗಳಲ್ಲಿ ಮತದಾನವಾಗಲಿದೆ.

ಏಳು ಹಂತಗಳ ಲೋಕಸಭಾ ಚುನಾವಣೆಯ ಕ್ಲೈಮ್ಯಾಕ್ಸ್ ಹಂತದಲ್ಲಿ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಘಟನಾನುಘಟಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಬಿಹಾರದ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್ ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿದ್ದಾರೆ. ಅವರು, 1107 ಕೋಟಿ ರೂ.ಗಳ ಆಸ್ತಿ-ಪಾಸ್ತಿ ಒಡೆಯರಾಗಿದ್ದಾರೆ. ಪಂಜಾಬ್‍ನ ಅಕಾಲಿ ದಳದ ಸುಖ್‍ಬಿರ್‍ಸಿಂಗ್ ಮತ್ತು ಹರ್‍ಸಿಮ್ರತ್ ಕೌರ್ ಎರಡು ಮತ್ತು ಮೂರನೆ ಸ್ಥಾನದಲ್ಲಿರುವ ಅತ್ಯಂತ ಶ್ರೀಮಂತ ಉಮೇದುವಾರರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೊನೆ ದಿನದ ಪ್ರಚಾರವಾದ ನಿನ್ನೆ ಪ್ರಧಾನಿ ಎರಡು ಕಡೆ ಚುನಾವಣಾ ರ್ಯಾಲಿ ನಡೆಸಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ಮಮತಾ ಬ್ಯಾನರ್ಜಿ ಅವರೂ ಕೂಡ ಸಾರ್ವಜನಿಕ ಸಭೆ ನಡೆದಿ ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ವಾಕ್ ಪ್ರಹಾರ ಮಾಡಿದರು.

ಇಂದು ಕೂಡ ಪ್ರಧಾನಿ ಮೋದಿ ವಿವಿಧೆಡೆ ಪ್ರಚಾರ ರ್ಯಾಲಿ ಕೈಗೊಂಡಿದ್ದಾರೆ. ಏಳನೆ ಹಂತದ ಚುನಾವಣೆಗಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಬಹು ಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ (ಉತ್ತರ ಪ್ರದೇಶ), ನಿತೀಶ್ ಕುಮಾರ್ (ಬಿಹಾರ), ಅಮರಿಂದರ್ ಸಿಂಗ್(ಪಂಜಾಬ್), ಕಮಲ್‍ನಾಥ್(ಮಧ್ಯಪ್ರದೇಶ) ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಚುನಾವಣಾ ರ್ಯಾಲಿಗಳಲ್ಲಿ ತಮ್ಮ ಪಕ್ಷಗಳ ಪರ ಮತ ಯಾಚಿಸಿದರು.

ಭಾರೀ ಭದ್ರತೆ: ಈಗಾಗಲೇ ನಡೆದ ಎಲ್ಲ ಆರು ಹಂತಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ತತಾ ಸೇರಿದಂತೆ ವಿವಿಧೆಡೆ ವ್ಯಾಪಕ ಗಲಭೆ ಮತ್ತು ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಏಳಣೆ ಹಂತದ ಮತದಾನಕ್ಕಾಗಿ ಈ ರಾಜ್ಯದಲ್ಲಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.

ಏಳನೇ ಹಂತದ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬಿಹಾರ ಮತ್ತು ಜಾರ್ಖಂಡ್ ನಕ್ಸಲರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಬಿಗಿ ಪಹರೆ ಹಾಕಲಾಗಿದೆ.

Sri Raghav

Admin