ಪ್ರಿಯತಮನನ್ನೇ ಅಪಹರಿಸಿ ಹಲ್ಲೆ ಮಾಡಿದ್ದ ಇಬ್ಬರು ಯುವತಿಯರು ಸೇರಿ 8 ಮಂದಿ ಸೆರೆ

Social Share

ಬೆಂಗಳೂರು,ಆ. 27-ಪ್ರಿಯಕರನನ್ನು ಅಪಹರಿಸಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಹನುಮಂತನಗರ ಠಾಣೆ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಕ್ಲಾರಾ, ಮಧು, ಸಂತೋಷ್, ಹೇಮಾವತಿ, ಮಸಣಕಿರಣ, ಅಶ್ವತ್ಥ್ ನಾರಾಯಣ, ಮನು ಮತ್ತು ಲೋಕೇಶ ಬಂಧಿತರು.

ಈಗಾಗಲೇ ಮದುವೆಯಾಗಿದ್ದ ಕ್ಲಾರಾ ಎಂಬಾಕೆ ಪತಿಯಿಂದ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಳು. ಈ ನಡುವೆ ಮಹದೇವಪ್ರಸಾದ್ ಎಂಬುವವರನ್ನು ಕ್ಲಾರಾ ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು ನಂತರ ಮೊಬೈಲ್ ನಂಬರ್‍ಗಳನ್ನು ವಿನಿಮಯ ಮಾಡಿಕೊಂಡು ಸ್ನೇಹ ಪ್ರೀತಿಗೆ ತಿರುಗಿತ್ತು.

ನಂತರದ ದಿನಗಳಲ್ಲಿ ಇವರಿಬ್ಬರು ಬಾಡಿಗೆಗೆ ಮನೆ ಮಾಡಿಕೊಂಡು ಸಹಜೀವನ (ಲಿವಿಂಗ್ ರಿಲೇಷನ್ಶಿಪ್)
ನಡೆಸುತ್ತಿದ್ದರು. ದಿನ ಕಳೆದಂತೆ ಇವರಿಬ್ಬರಿಗೂ ಪರಸ್ಪರ ಅನುಮಾನ ಶುರುವಾಗಿದೆ. ಕ್ಲಾರಾಗೆ ಬೇರೆ ಸಂಬಂಧ ಇರುವ ಬಗ್ಗೆ ಪ್ರಿಯಕರ ಮಹದೇವ ಪ್ರಸಾದ್‍ಗೆ ಅನುಮಾನ ಶುರುವಾಗಿದೆ. ಇತ್ತ ಕ್ಲಾರಾಗೂ ಸಹ ಮಹದೇವಪ್ರಸಾದ್‍ಗೆ ಬೇರೆ ಸಂಬಂಧ ಇದೆ ಎನ್ನುವ ಅನುಮಾನ ಮೂಡಿದೆ.

ಬಳಿಕ ಇವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಳೆದ 10 ದಿನದ ಹಿಂದೆ ಕೊನೆ ಬಾರಿ ನಿನ್ನನ್ನು ನೋಡಬೇಕು ಎಂದು ಹೇಳಿ ಕ್ಲಾರಾ ಮಹದೇವಪ್ರಸಾದನ್ನು ಮನೆ ಬಳಿ ಕರೆಸಿಕೊಂಡಿದ್ದಳು. ಅಂದು ರಾತ್ರಿ 11.30ರ ಸುಮಾರಿನಲ್ಲಿ ಮಹದೇವ ಪ್ರಸಾದ್ ಕ್ಲಾರಾ ಮನೆ ಬಳಿ ಹೋಗಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಐವರು ಯುವಕರು ಹಾಗೂ ಇಬ್ಬರು ಯುವತಿಯರು ಸೇರಿ ಮಹದೇವಪ್ರಸಾದ್ದನ್ನು ಬಲವಂತವಾಗಿ ಎಳೆದುಕೊಂಡು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ ವಾಪಸ್ಸು ಮನೆಗೆ ತಂದು ಬಿಟ್ಟಿದ್ದಾರೆ.

ಮಹದೇವ ಪ್ರಸಾದ್‍ಘಟನೆ ಸಂಬಂಧ ಹನುಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಎಂಟು ಮಂದಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

Articles You Might Like

Share This Article