ಬಾಡಿಗೆಗೆ ಪಡೆದ ಕಾರಿನಲ್ಲೇ ಬೆಂಕಿಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ..!

Spread the love

ಬೆಂಗಳೂರು, ಮೇ 22- ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಹೆಬ್ಬಾಳದ ಯಶವಂತ್ ಯಾದವ್ (23) ಮತ್ತು ಜ್ಯೋತಿ (23) ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳು.

ಹಲವು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಆದರೆ, ಇವರ ಮದುವೆಗೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು.
ಮೇ 18ರಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಯಶವಂತ್ ಯಾದವ್ ಟ್ಯಾಲಿ ಕ್ಲಾಸ್‍ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಬೈಕ್ ತೆಗೆದುಕೊಂಡು ಹೊರಬಂದಿದ್ದು, ರಾತ್ರಿಯಾದರೂ ಮನೆಗೆ ಹಿಂದಿರುಗಿಲ್ಲ. ಯಶವಂತ್ ಪೋಷಕರು ಗಾಬರಿಯಾಗಿ ಸ್ನೇಹಿತರನ್ನು ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ಹೆಬ್ಬಾಳ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.

ಮೇ 19ರಂದು ಜ್ಯೋತಿ ಮನೆ ಬಿಟ್ಟು ಹೋಗಿದ್ದು, ಅಂದು ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಆಕೆಯ ಪೋಷಕರು ಎಲ್ಲ ಕಡೆ ಹುಡುಕಾಡಿ ನಂತರ ಹೆಬ್ಬಾಳ ಪೋಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಎರಡೂ ಕುಟುಂಬಸ್ಥರಿಂದ ದೂರು ದಾಖಲಿಸಿಕೊಂಡಿದ್ದ ಪೋಲೀಸರು ಇಬ್ಬರ ಹುಡುಕಾಟದಲ್ಲಿ ತೊಡಗಿದ್ದರು.

ಮನೆಬಿಟ್ಟು ಹೊರಬಂದಿದ್ದ ಇವರಿಬ್ಬರೂ ಮಂಗಳೂರಿಗೆ ಹೋಗಿದ್ದು, ಹಸೇನ್ ಎಂಬುವವರಿಂದ ಸ್ವಿಫ್ಟ್ ಕಾರನ್ನು ಬಾಡಿಗೆಗೆ ಪಡೆದುಕೊಂಡು ಉಡುಪಿಗೆ ಬಂದಿದ್ದಾರೆ. ಇಂದು ಮುಂಜಾನೆ ಉಡುಪಿ ಜಿಲ್ಲೆ ಮಂದಾರ್ತಿ ಸಮೀಪದ ಹೆಗ್ಗುಂಜೆ ಬಳಿ ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿನಲ್ಲಿ ಹೊತ್ತಿ ಉರಿಯುತ್ತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ತಕ್ಷಣ ನೆರೆಹೊರೆಯವರ ಸಹಾಯದಿಂದ ಬೆಂಕಿ ನಂದಿಸಿದ್ದಾರೆ.

ಕಾರು ಭಾಗಶಃ ಸುಟ್ಟು ಹೋಗಿದೆ. ನಂತರ ಸ್ಥಳೀಯರು ಕಾರಿನೊಳಗೆ ನೋಡಿದಾಗ ಇಬ್ಬರ ಶವಗಳು ಪತ್ತೆಯಾಗಿವೆ. ತಕ್ಷಣ ಪೋಲೀಸರಿಗೆ ವಿಷಯ ತಿಳಿಸಿದ್ದಾರೆ. ಬ್ರಹ್ಮಾವರ ಠಾಣೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ಬೆಂಗಳೂರಿನ ನಿವಾಸಿಗಳು ಎಂಬುದನ್ನು ಪತ್ತೆಹಚ್ಚಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರೇಮಿಗಳಿಬ್ಬರೂ ಮನೆಯಲ್ಲಿ ಸುಳ್ಳು ಹೇಳಿ ಹೊರಬಂದು ಎಲ್ಲಿಗೆ ಹೋದರು, ಎಲ್ಲಿ ಮದುವೆಯಾದರು, ಮೂರು ದಿನಗಳ ಕಾಲ ಎಲ್ಲೆಲ್ಲಿ ಸುತ್ತಾಡಿದರು, ಉಡುಪಿಗೆ ಬಂದು ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂಬಿತ್ಯಾದಿ ಮಾಹಿತಿಗಳನ್ನು ಪೋಲೀಸರು ಕಲೆ ಹಾಕುತ್ತಿದ್ದಾರೆ.

Facebook Comments