LTTE ಪುನರುಜ್ಜೀವನಕ್ಕೆ ಮುಂದಾದವರ ಮೇಲೆ NIA ದಾಳಿ

Social Share

ನವದೆಹಲಿ,ಆ.7- ನಿಷೇಧಿತ ಎಲ್‍ಟಿಟಿಇ ಸಂಘಟನೆಯನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಪುನರುಜ್ಜೀವನಗೊಳಿಸಲು ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳಿಗೆ ಸೇರಿದ ಮನೆ ಹಾಗೂ ಇತರೆ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ(ಎನ್‍ಐಎ)ದಳ ದಾಳಿ ನಡೆಸಿದೆ.

ತಮಿಳುನಾಡಿನ ಚಂಗ್ಲಾಪಟ್ಲು ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಶ್ರೀಲಂಕಾದ ಡ್ರಗ್ಸ್ ಮಾಫಿಯಾ ನಿಯಂತ್ರಿಸುವ ಸಿ.ಗುಣಶೇಖರನ್ ಅಲಿಯಾಸ್ ಗುಣ ಮತ್ತು ಪುಷ್ಪರಾಜ್ ಅಲಿಯಾಸ್ ಪೊಕ್ಕುಟಿ ಕಣ್ಣ ಮತ್ತು ಇವರ ಸಹಚರ ಹಾಜಿ ಸಲೀಂನ ಶಂಕಾಸ್ಪದ ಚಟುವಟಿಕೆಗಳನ್ನು ಆಧರಿಸಿ ದಾಳಿ ನಡೆಸಲಾಗಿದೆ.

ಹಾಜಿ ಸಲೀಂ ಮೂಲತಃ ಪಾಕಿಸ್ತಾನದವನಾಗಿದ್ದು, ಭಾರತ ಮತ್ತು ಶ್ರೀಲಂಕಾದಲ್ಲಿ ಮಾದಕವಸ್ತು ಹಾಗೂ ಶಸ್ತ್ರಾಸ್ತ್ರದ ಅಕ್ರಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಆರೋಪಿಗಳ ಸಂಪರ್ಕ ಮತ್ತು ಸಂಭಾಷಣೆಗಳನ್ನು ಗಮನಿಸಿದ ನಂತರ ಎನ್‍ಐಎ ದಾಳಿ ನಡೆಸಿದೆ.

2009ರ ಮೇನಲ್ಲಿ ಶ್ರೀಲಂಕಾದ ಎಲ್‍ಟಿಟಿಇನ ವೇಟುಪಿಳ್ಳೈ ಪ್ರಭಾಕರನ್ ಹತ್ಯೆ ಬಳಿಕ ನಿಷೇಧಿತ ಸಂಘಟನೆ ನಿಷ್ಕ್ರಿಯವಾಗಿದೆ. ಅದಕ್ಕೂ ಮೊದಲು ಶ್ರೀಲಂಕಾ ಹಾಗೂ ಭಾರತದ ಕೆಲವು ರಾಜ್ಯಗಳಲ್ಲಿ ಅನೇಕ ವಿಧ್ವಂಸಕ ಕೃತ್ಯಗಳನ್ನು ಸಂಘಟನೆ ನಡೆಸಿತ್ತು. ಈ ಸಂಘಟನೆಯನ್ನು ಪುನರುಜ್ಜೀವನಗೊಳಿಸಲು ಆರೋಪಿಗಳು ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಗುಣಶೇಖರ್ ಮತ್ತು ಪುಷ್ಪ ಅವರು ಪಾಕಿಸ್ತಾನದ ಹಾಜಿ ಸಲೀಂ ಜೊತೆ ಸೇರಿ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳ ಸಾಗಾಣಿಕೆ ಮೂಲಕ ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಯತ್ನಿಸಿದ್ದರು ಎಂದು ಹೇಳಲಾಗಿದೆ.

ದಾಳಿ ವೇಳೆ ಕೆಲವು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಎನ್‍ಎಐ ಪ್ರಕಟಣೆಯಲ್ಲಿ ತಿಳಿಸಿದೆ. ಜುಲೈ 8ರಂದು ಈ ಕುರಿತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಎನ್‍ಐಎ ತನಿಖೆಯನ್ನು ಮುಂದುವರೆಸಿದೆ.

ಮತ್ತೊಂದೆಡೆ ಬೇರೊಂದು ಪ್ರಕರಣದಲ್ಲಿ ಐಸಿಸ್ ಉಗ್ರ ಸಂಘಟನೆಯ ಚಟುವಟಿಕೆಗಳನ್ನು ವಿಸ್ತರಿಸಲು ಯತ್ನಿಸಿದ್ದ ಆರೋಪಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ಇಂದು ಎನ್‍ಐಎ ದಾಳಿ ನಡೆಸಿದೆ.

ದೆಹಲಿಯ ಬಟ್ಲಹೌಸ್ , ಜೋಗಾಬಾಯಿ ಎಕ್ಸ್‍ಟೆನ್ಷನ್‍ನಲ್ಲಿ ವಾಸಿಸುತ್ತಿದ್ದ ಮೋಹ್ಸಿನ್ ಅಹಮ್ಮದ್ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈಗಾಗಲೇ ಮೊಹ್ಸಿನ್‍ನನ್ನು ಬಂಧಿಸಲಾಗಿದೆ. ಆರೋಪಿ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಚಟುವಟಿಕೆಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.

Articles You Might Like

Share This Article