ಅಹಮದಾಬಾದ್,ಆ.1-ಮಾರಣಾಂತಿಕ ಲುಂಪಿ ಚರ್ಮದ ಕಾಯಿಲೆಗೆ ತುತ್ತಾಗಿ ಗುಜರಾತ್ನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಗುಜರಾತ್ನ 33 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ ಈ ಸಾಂಕ್ರಾಮಿಕ ರೋಗ ವ್ಯಾಪಿಸಿದೆ. ಗುಜರಾತ್ನ ಕೃಷಿ ಮತ್ತು ಪಶು ಸಂಗೋಪನಾ ಸಚಿವ ರಾಘವ್ ಜೀ ಪಟೇಲ್ ಅವರ ಹೇಳಿಕೆಯ ಪ್ರಕಾರ 1240ಕ್ಕೂ ಹೆಚ್ಚು ಹಸುಗಳು ಸೋಂಕಿನಿಂದ ಮೃತಪಟ್ಟಿವೆ.
5.74 ಲಕ್ಷ ಹಸುಗಳಿಗೆ ಲಸಿಕೆ ಹಾಕಲಾಗಿದೆ. ಸೌರಾಷ್ಟ್ರ ಭಾಗದ ಕಚ್, ಜಾಮ್ನಾಘರ್, ದೇವಭೂಮಿ ದ್ವಾರಕ, ರಾಜ್ಪುತ್, ಪೋರಬಂದರ್, ಸುರೇಂದ್ರ ನಗರ್, ಅಂಬ್ರೇಲಿ, ಬಾವನಾಗರ್, ಬೋಟಾಡ್, ಜುಂಗಡ್, ಗಿರಿ ಸೋಮನಾಥ್ ಸೇರಿದಂತೆ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಂಕು ಹರಡಿದೆ.
ಹೀಗಾಗಿ ಸೋಂಕಿತ ಪ್ರದೇಶಗಳಿಂದ ಹಸುಗಳು ಮತ್ತು ಜಾನುವಾರುಗಳನ್ನು ಸಾಕಾಣಿಕೆ ಮಾಡದಂತೆ ನಿಷೇಧ ವಿಧಿಸಲಾಗಿದೆ. ಜಾನುವಾರುಗಳ ಜಾತ್ರೆಗಳಿಗೂ ಆ.21ರವರೆಗೆ ಕಡಿವಾಣ ಹಾಕಲಾಗಿದೆ.
ಸುಮಾರು 1746 ಹಳ್ಳಿಗಳ 56,328 ಹಸುಗಳು ಸೋಂಕಿಗೆ ಸಿಲುಕಿವೆ. ರೋಗ ನಿಯಂತ್ರಣಕ್ಕಾಗಿ 192 ಪಶು ವೈದ್ಯಾಧಿಕಾರಿಗಳು, 568 ಇನ್ಸ್ಪೆಕ್ಟರ್ಗಳನ್ನು ನಿಯೋಜಿಸಲಾಗಿದೆ. 298 ಹೊರಗುತ್ತಿಗೆ ಪಶುಸಂಗೋಪನಾ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗಿದೆ.
ಲುಂಪಿ ಚರ್ಮದ ಕಾಯಿಲೆ ಸೊಳ್ಳೆ, ಜಿಗಣೆ, ಜಿಗಟದಂತಹ ಕೀಟಗಳ ಮೂಲಕ ಹರಡುತ್ತದೆ. ಕಲುಷಿತ ಆಹಾರ ಮತ್ತು ನೀರು ಹಾಗೂ ಸೋಂಕಿತ ಹಸುವಿನ ಸಂಪರ್ಕವು ಕಾಯಿಲೆ ಹರಡಲು ಕಾರಣವಾಗಿದೆ.
ವೈರಾಣು ತಗುಲಿದ ಹಸುಗಳು ಜ್ವರ, ಮೂಗು ಮತ್ತು ಕಣ್ಣು ಸೋರುವಿಕೆ, ವಿಪರೀತ ನಡುಗುವುದು, ಹಾಲು ಉತ್ಪಾದನೆಯಲ್ಲಿ ಕ್ಷೀಣವಾಗುವುದು, ಆಹಾರ ತಿನ್ನಲು ಕಷ್ಟಪಡುವ ರೋಗ ಲಕ್ಷಣಗಳನ್ನು ಹೊಂದಿರುತ್ತವೆ. ಸೋಂಕು ವಿಪರೀತವಾದಾಗ ಸಾವು ಸಂಭವಿಸುತ್ತದೆ ಎಂದು ಹೇಳಲಾಗಿದೆ.
ಪ್ರತಿಪಕ್ಷ ಕಾಂಗ್ರೆಸ್ ಗುಜರಾತ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದು, ಸೋಂಕಿನಿಂದ ಮೃತಪಟ್ಟ ಜಾನುವಾರುಗಳ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ. ಜಾನುವಾರುಗಳ ಜೀವಹಾನಿಯಾಗಿದೆ. ರೈತರು ಅಪಾರ ನಷ್ಟ ಅನುಭವಿಸಿದ್ದಾರೆ ಎಂದು ಕಿಡಿಕಾರಿದೆ.